May 21, 2026
Thursday, May 21, 2026
spot_img

ಆನ್ ಲೈನ್ ನಲ್ಲಿ ಬಾಡಿಗೆ ಕಾರು ಬುಕ್ ಮಾಡಲು ಹೋಗಿ 99 ಸಾವಿರ ಪಂಗನಾಮ

ಹೊಸ ದಿಗಂತ ವರದಿ, ಬೆಳಗಾವಿ:

ಆನ್ ಲೈನ್ ನಲ್ಲಿ ಬಾಡಿಗೆ ಕಾರು ಬುಕ್ ಮಾಡಲು ಹೋಗಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 99 ಸಾವಿರ ರೂಪಾಯಿ ಹಣವನ್ನು ವಂಚಕರು ಎಗರಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಆನ್ ಲೈನ್ ನಲ್ಲಿ ಹುಡುಕಾಟ

ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶಿರಸ್ತೆದಾರರಾಗಿರುವ ಸಂಜೀವ್ ಮುತ್ತೆಪ್ಪಗೋಳ ಅವರು ವಂಚನೆಗೆ ಒಳಗಾದ ವ್ಯಕ್ತಿ. ಮಾರ್ಚ್ 27ರಂದು ಬಾಡಿಗೆ ಆಧಾರದಲ್ಲಿ ಕಾರು ಬುಕ್ ಮಾಡಲು ಆನ್ ಲೈನ್ ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಲಕ್ಷ್ಮೀ ಕಾರ್ ರೆಂಟಲ್ ಗೋವಾ ಎಂಬ ವೆಬ್ ಸೈಟ್ ಸಂಬಂಧಿಸಿದ ನೀಲಂ ರಜಪೂತ್ ಎಂಬಾತನನ್ನು ಸಂಪರ್ಕಿಸಿದ್ದಾರೆ.

ವಂಚಕನ ಮಾತು ನಂಬಿ ಮೋಸ

ಬೆಳಗಾವಿ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಕಾರು ಬೇಕೆಂದು ವಿಚಾರಿಸಿದಾಗ, 800 ರೂ. ಬಾಡಿಗೆ ಆಗುತ್ತದೆ. ಮೊದಲು ಆ್ಯಪ್ ಡೌನ್ಲೋಡ್ ಮಾಡಿಕೊಂಡು ಕಾರು ಬುಕ್ ಮಾಡಬೇಕೆಂದು ತಿಳಿಸಿದ್ದಾನೆ. ಬಳಿಕ ಕಾರ್ ರೆಂಟಲ್ ಹೆಸರಿನ ಆ್ಯಪ್ ಲಿಂಕ್ ಕಳುಹಿಸಿದ್ದಾನೆ. ಆತನ ಸೂಚನೆಯಂತೆ ಸಂಜೀವ್ ಅವರು ಆ್ಯಪ್ ಡೌನ್ಲೋಡ್ ಮಾಡಲು ಪ್ರಯತ್ನಿಸಿದರೂ ಅದು ಸರಿಯಾಗಿ ಡೌನ್ಲೋಡ್ ಆಗಿರಲಿಲ್ಲ. ನಂತರ ವಂಚಕನ ಸೂಚನೆಯಂತೆ ಫೋನ್ಪೇ ಮೂಲಕ 149 ರೂ. ಪಾವತಿಸಿದ್ದಾರೆ. ಆದರೂ ಕಾರ್ ಬುಕ್ಕಿಂಗ್ ಖಚಿತವಾಗದ ಹಿನ್ನೆಲೆಯಲ್ಲಿ ಮತ್ತೆ ವಂಚಕನಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ.

ಬ್ಯಾಂಕ್ ವಿವರ ಕೇಳಿ ಹಣ ಎಗರಿಸಿದ ವಂಚಕ

ಈ ವೇಳೆ ಆ್ಯಪ್ ಡೌನ್ಲೋಡ್ ಪ್ರಕ್ರಿಯೆ ತಿಳಿಸುವ ನೆಪದಲ್ಲಿ ಗೂಗಲ್ ಮೀಟ್ ಮೂಲಕ ಮೊಬೈಲ್ ಸ್ಕ್ರೀನ್ ಶೇರ್ ಮಾಡುವಂತೆ ಹೇಳಿದ್ದಾನೆ. ದೂರುದಾರರು ತಿಳಿಯದಂತೆ ಅವರ ಮೊಬೈಲ್ ಹಾಗೂ ಬ್ಯಾಂಕ್ ವಿವರಗಳಿಗೆ ಪ್ರವೇಶ ಪಡೆದ ವಂಚಕ, ಖಾತೆಯಲ್ಲಿದ್ದ 99 ಸಾವಿರ ರೂ. ಹಣವನ್ನು ಎಗರಿಸಿದ್ದಾನೆ.

ಈ ಕುರಿತು ಬೆಳಗಾವಿ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !