ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿವಾಳಿ ಅಂಚಿಗೆ ತಲುಪಿ, ಸದ್ಯ ಪಾರಾಗಿರುವ ಗೋ ಫಸ್ಟ್ ಏರ್ಲೈನ್ ಸಂಸ್ಥೆ ಇದೀಗ
ತನ್ನ ಪುನಶ್ಚೇತನ ಯಾವ ರೀತಿ ಆಗಬೇಕು ಎಂಬ ಯೋಜನೆಯನ್ನು ತ್ವರಿತವಾಗಿ ರೂಪಿಸಬೇಕಿದೆ. 30 ದಿನದೊಳಗೆ ಗೋ ಫಸ್ಟ್ ತನ್ನ ಪ್ಲಾನ್ ಸಲ್ಲಿಸಬೇಕು ಎಂದು ವಿಮಾನಯಾನ ಮಹಾನಿರ್ದೇಶನಾಲಯ (DGCA) ಹೇಳಿದೆ. ಇದರ ಬೆನ್ನಲ್ಲೇ ಗೋ ಫಸ್ಟ್ ಏರ್ಲೈನ್ ಸಂಸ್ಥೆ ಮೇ 28ರ ವರೆಗೂ ತನ್ನ ಎಲ್ಲಾ ವಿಮಾನ ಹಾರಾಟ ಸೇವೆಯನ್ನು ರದ್ದು ಮಾಡಿದೆ. ಈ ಮೊದಲು ಮೇ 26ರ ವರೆಗೆ ಫ್ಲೈಟ್ ಹಾರಾಟ ಇರುವುದಿಲ್ಲ ಎಂದು ಹೇಳಿತ್ತು. ಈಗ ಇನ್ನೂ ಎರಡು ದಿನ ಅದನ್ನು ವಿಸ್ತರಿಸಿದೆ. ಕಾರ್ಯಾಚರಣೆ ಸಮಸ್ಯೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದಿಕೊಳ್ಳಲಾಗಿದೆ.
ಈ ಕುರಿತು ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದ್ದು, “ಕಾರ್ಯಾಚರಣೆಯ ಕಾರಣಗಳಿಂದಾಗಿ ಮೇ 28, 2023ರ ವರೆಗೆ ನಿಗದಿಯಾಗಿದ್ದ ಗೋ ಫಸ್ಟ್ ವಿಮಾನಗಳನ್ನ ರದ್ದುಪಡಿಸಲಾಗಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ವಿಮಾನ ರದ್ದತಿಯಿಂದ ಉಂಟಾದ ಅನಾನುಕೂಲತೆಗೆ ನಾವು ಕ್ಷಮೆಯಾಚಿಸುತ್ತೇವೆ. ಮೂಲ ಪಾವತಿ ವಿಧಾನಕ್ಕೆ ಶೀಘ್ರದಲ್ಲೇ ಪೂರ್ಣ ಮರುಪಾವತಿ ನೀಡಲಾಗುವುದು. ವಿಮಾನ ರದ್ದತಿಗಳು ನಿಮ್ಮ ಪ್ರಯಾಣದ ಯೋಜನೆಗಳನ್ನ ಅಡ್ಡಿಪಡಿಸಿರಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ನಮಗೆ ಸಾಧ್ಯವಿರುವ ಎಲ್ಲ ಸಹಾಯವನ್ನ ಒದಗಿಸಲು ನಾವು ಬದ್ಧರಾಗಿದ್ದೇವೆ. ನಿಮಗೆ ತಿಳಿದಿರುವಂತೆ, ಕಂಪನಿಯು ತಕ್ಷಣದ ಪರಿಹಾರ ಮತ್ತು ಕಾರ್ಯಾಚರಣೆಗಳ ಪುನರುಜ್ಜೀವನಕ್ಕಾಗಿ ಅರ್ಜಿಯನ್ನ ಸಲ್ಲಿಸಿದೆ. ನಾವು ಶೀಘ್ರದಲ್ಲೇ ಬುಕಿಂಗ್ ಪುನರಾರಂಭಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದೆ.