ಪಾರಿಜಾತ: ನೆಲಕ್ಕೆ ಬಿದ್ದರೂ ದೋಷ ಅಂಟದ ಶ್ರೇಷ್ಠ ಹೂವು, ಇದರ ವಿಶೇಷತೆ ತಿಳಿಯಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾರಿಜಾತ, ಇವುಗಳನ್ನು ದೇವತೆಗಳ ಹೂ ಎಂತಲೂ, ಪಾರಿಜಾತ ಮರವನ್ನು ದೇವತಾ ವೃಕ್ಷ ಎಂತಲೂ ಕರೆಯುತ್ತಾರೆ. ಪಾರಿಜಾತದ ಜೊತೆಗೆ ಮಂದಾರ, ಸಂತಾನ ವೃಕ್ಷ, ಕಲ್ಪವೃಕ್ಷ ಮತ್ತು ಹರಿಚಂದನವನ್ನು ದೇವವೃಕ್ಷಗಳೆನ್ನುತ್ತಾರೆ. ಅವು ಮಾಲಿನ್ಯಕಾರಕವಲ್ಲ. ಲಕ್ಷ್ಮಿ ದೇವತೆಯೊಂದಿಗೆ ಕ್ಷೀರಸಾಗರದಿಂದ ಜನಿಸಿದ ಪಾರಿಜಾತವು ತುಂಬಾ ಶ್ರೇಷ್ಠವಾಗಿದೆ. ಪುರಾಣದ ಪ್ರಕಾರ, ಸತ್ಯಭಾಮೆಯ ಕೋರಿಕೆಯಂತೆ ಶ್ರೀಕೃಷ್ಣನು ದೇವಲೋಕಕ್ಕೆ ಹೋಗಿ, ಇಂದ್ರನನ್ನು ಜಯಿಸಿ ಪಾರಿಜಾತ ವೃಕ್ಷವನ್ನು ಭೂಲೋಕಕ್ಕೆ ತಂದನು ಎಂಬ ಕಥೆಯಿದೆ.

ಬಿಳಿ ಹೂವಿನ ಮಧ್ಯದಲ್ಲಿ ಕಿತ್ತಳೆ ಬಣ್ಣವನ್ನು ಹೊಂದಿರುವ ಈ ಹೂ ನೆಲಕ್ಕೆ ಬಿದ್ದರೂ ದೋಷ ಅಂಟುವುದಿಲ್ಲವಂತೆ. ಆದ್ದರಿಂದಲೇ ಪೂಜೆಗೆಂದು ಹೂ ಬಿಡಿಸಲು ಹೋದಾಗ ಕೆಳಗೆ ಬಿದ್ದರೂ ಅವುಗಳನ್ನು ಆಯ್ದು ತರಲಾಗುತ್ತದೆ. ಸಾಮಾನ್ಯವಾಗಿ ನೆಲಕ್ಕೆ ಬಿದ್ದ ಹೂ ದೇವರಿಗೆ ಶ್ರೇಷ್ಠ ಅಲ್ಲ, ಎಂಬುದು ನಂಬಿಕೆ. ಆದರೆ, ಪಾರಿಜಾತ ದೈವಿಕ ಹೂವುಗಳು, ಲಕ್ಷ್ಮಿ ದೇವಿಗೆ ಪ್ರಿಯವಾದ ಹೂ ಆದ್ದರಿಂದಲೇ ಪಾರಿಜಾತ ಕೆಳಕ್ಕೆ ಬಿದ್ದರೂ ಪೂಜೆಗೆ ಬಳಸುವ ಅಪರೂಪದ ಅದ್ಭುತ ಪುಷ್ಪ ಎನಿಸಿವೆ.

ಸುಗಂಧಭರಿತ ಪಾರಿಜಾತ ಪುಷ್ಪಗಳಿಂದ ದೇವರನ್ನು ಪ್ರಾರ್ಥಿಸಿದರೆ ಸಕಲ ಸೌಭಾಗ್ಯ ದೊರೆಯುತ್ತದೆ ಎನ್ನುತ್ತಾರೆ ವಿದ್ವಾಂಸರು. ಈ ಹೂವುಗಳು ರಾತ್ರಿಯಲ್ಲಿ ತಮ್ಮ ಪರಿಮಳವನ್ನು ಹರಡುತ್ತವೆ ಮಾತ್ರವಲ್ಲ, ಪಾರಿಜಾತ ವೃಕ್ಷವಿರುವಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಆದರೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಪಾರಿಜಾತ ರಾತ್ರಿ ಅರಳಿ ಬೆಳಗಾಗುವುದರೊಳಗೆ ನೆಲಕ್ಕೆ ಬೀಳುತ್ತವೆ. ಇದಕ್ಕೆ ದೇವೇಂದ್ರನ ಶಾಪವಿದೆ.

ಕೆಳಗೆ ಬಿದ್ದರೂ ಹೂವಿನ ಸೌಂದರ್ಯ.. ಪರಿಮಳ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ರತ್ನಗಂಬಳಿಯಂತೆ ಮರದ ಕೆಳಗೆ ಪಾರಿಜಾತದ ಸೊಬಗನ್ನು ನೋಡಿದಾಗ ಮನಸ್ಸು ಆನಂದದಿಂದ ತುಂಬಿ ತುಳುಕುತ್ತದೆ. ಮರದ ಕೆಳಗೆ ಬೀಳುವ ಹೂಗಳನ್ನು ಮಾತ್ರ ಜಾಗರೂಕತೆಯಿಂದ ಆಯ್ದು ದೇವರ ಸೇವೆಗೆ ಬಳಸುತ್ತಾರೆ.

ಪಾರಿಜಾತದ ಗಿಡ ನೆಟ್ಟರೆ ಸಾಮಾನ್ಯ ಗಿಡಗಳಂತೆ ಬೆಳೆಸಬಾರದು. ಸಿಕ್ಕಿ ಸಿಕ್ಕಿ ನೀರನ್ನು ಗಿಡಕ್ಕೆ ಹಾಕುವಂತಿಲ್ಲ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಾರಿಜಾತ ಮರದ ಸುತ್ತಲೂ ಸ್ವಚ್ಛವಾಗಿಡಬೇಕು. ಏಕೆಂದರೆ ಈ ಮರದ ನೆರಳಿನಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಸಗಣಿ ನೀರಿನಿಂದ ಮರದ ಕೆಳಗೆ ಸಾರಿಸಿ, ಅದರ ಮೇಲೆ ಬೀಳುವ ಹೂವುಗಳನ್ನು ದೇವರಿಗೆ ಬಳಸಬೇಕು.

ಪಾರಿಜಾತ ಆರೋಗ್ಯಕ್ಕೂ ಉಪಯೋಗ. ಇದರ ಎಲೆಗಳಲ್ಲಿರುವ ಫ್ಲೇವನಾಯ್ಡ್ ಮಂಡಿ ನೋವನ್ನು ಕಡಿಮೆ ಮಾಡುತ್ತದೆ. ನಿಫಾ ವೈರಸ್‌ಗೂ ಪಾರಿಜಾತದ ಎಲೆಗಳು ಉಪಯುಕ್ತ ಎನ್ನುತ್ತಾರೆ ಸಂಶೋಧಕರು. ಪಾರಿಜಾತ ಮರ, ಎಲೆಗಳು, ಹೂವುಗಳು ಮತ್ತು ಬೀಜಗಳು ಎಲ್ಲವೂ ಅದ್ಭುತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!