Saturday, December 9, 2023

Latest Posts

ಮೈದುಂಬಿ ಹರಿಯುತ್ತಿದೆ ‘ಮಳೆಗಾಲದ ಸ್ವರ್ಗ’ ಗೋಕಾಕ ಜಲಪಾತ, ಎಲ್ಲೆಲ್ಲೂ ಪ್ರವಾಸಿಗರೇ!

  • ಪ್ರದೀಪ ನಾಗನೂರ

ಗೋಕಾಕ: ನಯಾ ನಗರವೇಂದೆ ಪ್ರಸಿದ್ಧಿ ಪಡೆದಿರುವ ಗೋಕಾಕ ಜಲಪಾತ ಮಳೆಗಾಲದ ಸ್ವರ್ಗವಾಗಿದೆ. ಈ ಜಲಪಾತ ಮಳೆಗಾಲದ ಪ್ರಾರಂಭದ ಎರಡು ತಿಂಗಳು ಮೈದುಂಬಿ ಹರಿಯುತ್ತದೆ. ಈ ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯಗಳ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಜೀವನದಿ ಘಟಪ್ರಭೆ ನದಿಯ ಜಲಾನಯನ ಪ್ರದೇಶದ ಹಾಗೂ ಬೆಳಗಾವಿ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಉತ್ತಮ ಮಳೆಯಾದಾರೆ ಸಾಕು ಗೋಕಾಕ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ. ಈ ಜಲಪಾತ ಭೋರ್ಗರೆಯುತ್ತ 180 ಮೀಟರ್ ಆಳಕ್ಕೆ ಧುಮುಕುವ ಮನಮೋಹಕ, ರುದ್ರರಮಣೀಯ ದೃಶ್ಯಕ್ಕೆ ಮನಸೋಲದವರೇ ಇಲ್ಲ.

ಉಳಿದ ಜಲಪಾತಗಳಿಗಿಂತ ಇದು ತುಂಬಾ ವಿಭಿನ್ನವಾಗಿದೆ. ಮಳೆಗಾಲದಲ್ಲಿ ಈ ಜಲಪಾತ ಆಸ್ವಾದಿಸುವುದೇ ಒಂದು ಆನಂದ. ಕೆಂಪು ಮಿಶ್ರಿತ ನೀರಿನ ಕಲರವದ ಹತ್ತಿರಕ್ಕೆ ಹೋದಂತೆ ಹಾಲಿನಂತೆ ಕಂಗೊಳಿಸುವ ಗೋಕಾಕ ಫಾಲ್ಸ್, ಕರದಂಟು ನಗರಿ ಗೋಕಾಕ ನಗರದಿಂದ 6 ಕಿ.ಮೀ ಅಂತರದಲ್ಲಿದೆ.

ವಿದ್ಯುತ್ ಉತ್ಪಾದನೆ
ಜೂನ್ ತಿಂಗಳಿನಿಂದ ಅಕ್ಟೋಬರ್‌ವರೆಗೆ ತುಂಬಿ ಹರಿಯುವ ಈ ಜಲಪಾತದ ಕೆಳಗೆ ವಿದ್ಯುತ್ ಉತ್ಪಾದನೆ ಘಟಕವಿದೆ. ಈ ವಿದ್ಯುತ್ ಘಟಕವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ ೧1885-87ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದ ಇತಿಹಾಸವಿದೆ. ಏಷ್ಯಾ ಖಂಡದಲ್ಲೆ ಪ್ರಪ್ರಥಮ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಎಂದು ಊಹಿಸಲಾಗಿದೆ. ಈ ಜಲಪಾತದ ವಿದ್ಯುತ್‌ನ್ನು ಗೋಕಾಕ ಫಾಲ್ಸ್ ಟೇಕ್ಸಟೈಲ್ ಮಿಲ್, ಹೆಸ್ಕಾಂ ಸೇರಿದಂತೆ ಸ್ಥಳೀಯ ಫಾಲ್ಸನಲ್ಲಿ ನೆಲೆಸಿರುವ ಕಾರ್ಮಿಕರ ಮನೆಗಳಿಗೆ ವಿದ್ಯುತ್ ಸರಬರಾಜು ನೀಡಲಾಗುತ್ತದೆ.

ತೂಗು ಸೇತುವೆ
ಗೋಕಾಕ ಫಾಲ್ಸ್ನ ಮತ್ತೊಂದು ವಿಶೇಷತೆ ಎಂದರೆ ತೂಗು ಸೇತುವೆ. ಬ್ರಿಟಿಷರ ಕಾಲದಲ್ಲಿ ಇದನ್ನು ಮರದ ಕಟ್ಟಿಗೆ (ಫಳಿಗಳು) ಮತ್ತು ಕಬ್ಬಿಣದ ಸರಳುಗಳಿಂದ ಕಟ್ಟಲಾಗಿದೆ. ಜಲಪಾತ ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆಯ ಮೇಲೆ ನಡೆದಾಡುವದೇ ಒಂದು ಅದ್ಭುತ ರೊಮಾಂಚನದ ತೂಗುಯ್ಯಾಲೆಯ ಅನುಭವ ನೀಡುತ್ತದೆ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕಾರಿಯಗಿದೆ. ರಾಜ್ಯದಲ್ಲಿಯೇ ಅತಿದೊಡ್ಡ ತೂಗು ಸೇತುವೆ ಇದಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೆಎಸ್ಆರ್ ಟಿಸಿ ಸಂಸ್ಥೆಯಿಂದ ಗೋಕಾಕ ಫಾಲ್ಸ್ ವಿಶೇಷ ಪ್ಯಾಕೆಜ್ ಟೂರ್ ಸಹ ಆರಂಭಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!