ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶೃಂಗೇರಿ ಶಾರದಾ ಪೀಠದ ಹಿರಿಯ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರದ 50ನೇ ವರ್ಷದ ಸುವರ್ಣ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸುವರ್ಣ ಭಾರತೀ ಕಾರ್ಯಕ್ರಮವು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆಯಿತು.
ವೇದಾಂತ ಭಾರತಿ ಮತ್ತು ಶಾಂಕರತತ್ವ ಪ್ರಸಾರ ಅಭಿಯಾನ ಹಾಗೂ ಮಿಥಿಕ್ ಸೊಸೈಟಿ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷ ಜನ ಕುಳಿತು ಏಕಕಾಲದಲ್ಲಿ ಏಕ ಕಂಠದ ಹೃಸ್ವರದಲ್ಲಿ ‘ನಮಃ ಶಿವಾಯ ಸ್ತೋತ್ರ’ ಪಾರಾಯಣವನ್ನು ಮಾಡಿ ಶೃಂಗೇರಿ ಜಗದ್ಗುರುಗಳಿಗೆ ಮಹಾಸಮರ್ಪಣೆ ಮಾಡಿದರು .
ಈ ವೇಳೆ ಹಾಜರಿದ್ದ ಇಂಡಿಯನ್ ಬುಕ್ ಆ ರೆಕಾರ್ಡ್ ಸಮಿತಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಶಿವನ ಪಂಚಾಕ್ಷರಿ ಮಂತ್ರವನ್ನು ಏಕ ಕಾಲದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪಾರಾಯಣ ಮಾಡಿದ ದಾಖಲೆಯನ್ನು ಘೋಷಿಸಿ ಪ್ರಮಾಣಪತ್ರವನ್ನು ಜಗದ್ಗುರುಗಳಿಗೆ ನೀಡಿದರು.
ಈ ಸಂದರ್ಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಿರಿಯ ಜಗದ್ಗುರು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಹಿಂದುಗಳು ಒಗ್ಗಟ್ಟಾದರೆ ಇಡೀ ವಿಶ್ವಕ್ಕೆ ಕಲ್ಯಾಣವಾಗುತ್ತದೆ. ಆದ್ದರಿಂದ ಜಗತ್ತಿನ ಎಲ್ಲೆಡೆ ಇರುವ ಹಿಂದುಗಳು ಐಕ್ಯಮತ್ಯವನ್ನು ಸಾಧಿಸಬೇಕು ಎಂದು ಕರೆ ನೀಡಿದರು.
ಪ್ರತಿ ಪೂಜೆಯ ಅಂತ್ಯದಲ್ಲಿ ಸರ್ವೇಜನಾಃ ಸುಖಿನೋ ಭವಂತು ಎಂದು ಆಶಿಸುವ ಜಗತ್ತಿನ ಏಕಮಾತ್ರ ಧರ್ಮ ಹಿಂದು ಸನಾತನ ಧರ್ಮ. ಆದ್ದರಿಂದ ಹಿಂದು ಧರ್ಮಕ್ಕೆ ಒಳಿತಾದರೆ ಅದರಿಂದ ಇಡೀ ವಿಶ್ವಕ್ಕೆ ಒಳಿತಾಗುತ್ತದೆ. ಜಗತ್ತಿನ ಎಲ್ಲೆಡೆ ಇರುವ ಕೋಟ್ಯಾಂತರ ಹಿಂದುಗಳು ಶಾರೀರಿಕವಾಗಿ ಒಂದುಗೂಡಲು ಸಾಧ್ಯವಿಲ್ಲ. ಆದರೆ ಮಾನಸಿಕವಾಗಿ ಒಂದುಗೂಡಲು ಸಾಧ್ಯ.ಶಂಕರ ಭಗವತ್ಪಾದರ ಕೃಪಾಶೀರ್ವಾದದಿಂದಲೇ ಇಂತಹ ದೊಡ್ಡ ದಾಖಲೆಯ ಕಾರ್ಯಕ್ರಮ ನಡೆದಿದ್ದು, ಹಿರಿಯ ಜಗದ್ಗುರುಗಳ ಧರ್ಮೊನ್ನತಿಯ ಕಾರ್ಯಕ್ಕೆ ಮಹಾಗೌರವ ಸಮರ್ಪಣೆಯಾಗಿದೆ ಎಂದು ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಯಡತೊರೆ ಮಠದ ಶ್ರೀಶಂಕರಭಾರತೀ ಮಹಾಸ್ವಾಮಿಗಳು, ಶ್ರೀಬ್ರಹ್ಮಾನಂದ ಭಾರತೀ ಸ್ವಾಮಿಗಳು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿ.ಸೋಮಣ್ಣ, ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ತೇಜಸ್ವಿಸೂರ್ಯ, ಶಾಸಕ ಗರುಡಾಚಾರ, ಅಧಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.