ಮಾ.26 ರಂದು ಗೋಲ್ಡ್‌ಫಿಂಚ್ ಸಿಟಿಯಲ್ಲಿ 5ನೇ ವರ್ಷದ ‘ಮಂಗಳೂರು ಕಂಬಳ’

ಹೊಸದಿಗಂತ ವರದಿ, ಮಂಗಳೂರು:

ಮಂಗಳೂರು ನಗರದ ಬಂಗ್ರಕೂಳೂರು ಗೋಲ್ಡ್‌ಫಿಂಚ್ ಸಿಟಿಯಲ್ಲಿ ೫ನೇ ವರ್ಷದ ‘ರಾಮ ಲಕ್ಷ್ಮಣ’ ಜೋಡುಕರೆ ಕಂಬಳ ಮಾ.26ರ ಶನಿವಾರ (ನಾಳೆ) ನಡೆಯಲಿದೆ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ ತಿಳಿಸಿದ್ದಾರೆ.
ಅವರು ಗುರುವಾರ ಕಂಬಳ ಕ್ರೀಡಾಂಗಣದ ಬಳಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ‘ಮಂಗಳೂರು ಕಂಬಳ’ದ ವಿವರಗಳನ್ನು ನೀಡಿದರು.
ಬೆಳಿಗ್ಗೆ 8 ಗಂಟೆಗೆ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಕೆ.ಚಿತ್ತರಂಜನ್ ಕಂಬಳವನ್ನು ಉದ್ಘಾಟಿಸುವರು. ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಗಣೇಶ ರಾವ್ ದೀಪ ಪ್ರಜ್ವಲನೆ ಮಾಡುವರು. ಕದ್ರಿ ಯೋಗೀಶ್ವರ ಮಠದ ಶ್ರೀ ರಾಜಯೋಗಿ ನಿರ್ಮಲನಾಥ ಜಿ.ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ, ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮತ್ತು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಲಿದೆ ಎಂದರು.
ಶನಿವಾರ ಸಂಜೆ 6 ಗಂಟೆಗೆ ಎಂಆರ್‌ಜಿ ಸಮೂಹದ ಅಧ್ಯಕ್ಷ ಕೆ.ಪ್ರಕಾಶ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವ ಎಸ್.ಅಂಗಾರ, ಸಂಸತ್ ಸದಸ್ಯ ನಳಿನ್‌ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ಸಂಸತ್ ಸದಸ್ಯರಾದ ಬಿ.ವೈ.ರಾಘವೇಂದ್ರ, ತೇಜಸ್ವಿಸೂರ್ಯ, ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಬೃಜೇಶ್ ಚೌಟ ನುಡಿದರು.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ವಿವಿಧ ಕ್ಷೇತ್ರಗಳ ಗಣ್ಯರು ಬಹುಮಾನ ವಿತರಣಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದ ಬೃಜೇಶ್ ಚೌಟ, ಕನಹಲಗೆ ವಿಭಾಗ, ಹಗ್ಗ ಹಿರಿಯ ವಿಭಾಗ ಮತ್ತು ನೇಗಿಲು ಹಿರಿಯ ವಿಭಾಗದ ವಿಜೇತರಾಗಿ ಪ್ರಥಮ ಎರಡು ಪವನು ಚಿನ್ನ, ದ್ವಿತೀಯ ಒಂದು ಪವನು ಚಿನ್ನದ ಬಹುಮಾನವಿದೆ ಎಂದರು.
ಅಡ್ಡ ಹಲಗೆ ಮತ್ತು ನೇಗಿಲು ಕಿರಿಯ ವಿಭಾಗದ ವಿಜೇತರಿಗೆ ಕ್ರಮವಾಗಿ ಒಂದು ಪವನು ಮತ್ತು ಅರ್ಧ ಪವನು ಚಿನ್ನದ ಬಹುಮಾನ ನೀಡಿ ಗೌರವಿಸಲಾಗುವುದು. ಕಂಬಳ ಕ್ಷೇತ್ರದ ತಜ್ಞರು ತೀರ್ಪುಗಾರರಾಗಿ ಸಹಕರಿಸಲಿದ್ದಾರೆ. ಮಂಗಳೂರು ಕಂಬಳಕ್ಕೆ ೧೩೦ರಿಂದ ೧೫೦ ಜೋಡಿ ಕೋಣಗಳನ್ನು ನಿರೀಕ್ಷಿಸಲಾಗಿದೆ. ಮಂಗಳೂರು ಕಂಬಳವನ್ನು ಜನಪ್ರಿಯಗೊಳಿಸುವ ಭಾಗವಾಗಿ ಛಾಯಾಚಿತ್ರ ಮತ್ತು ಇನ್‌ಸ್ಟಾಗ್ರಾಂ ರೀಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಬೃಜೇಶ್ ಚೌಟ ವಿವರಿಸಿದರು.
ಕಂಬಳದಲ್ಲಿ ಸದ್ಗುರ ಅವರ ಇಶಾ ಫೌಂಡೇಶನ್ ವತಿಯಿಂದ ‘ಸೇವ್ ಸಾಯಿಲ್’ ಚಳವಳಿಯ ಕುರಿತಾಗಿ ಜಾಗೃತಿ ಮೂಡಿಸಲಾಗುವುದು ಎಂದು ಫೌಂಡೇಶನ್‌ನ ಕಾರ್ಯಕರ್ತ ದೀಪಕ್ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಕಂಬಳ ಸಮಿತಿ ಪದಾಕಾರಿಗಳಾದ ಪಿ.ಆರ್.ಶೆಟ್ಟಿ, ವಿಜಯಕುಮಾರ್ ಕಂಗಿನಮನೆ, ಗುರುಚಂದ್ರ ಹೆಗ್ಡೆ, ಸಂಜಯ ಪ್ರಭು, ಸಚಿನ್ ಶೆಟ್ಟಿ, ಸುಧಾಕರ ಶೆಟ್ಟಿ ಮೊಗರೋಡಿ ಮತ್ತು ಸುಜಿತ್ ಪ್ರತಾಪ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!