ಗೋನೂರಿನ ಗೋಶಾಲೆಯಲ್ಲಿ ಜನಾಕರ್ಷಣೆಗೊಂಡ ಗೀರ್, ಕಾಂಕ್ರೀಜ್ ತಳಿಗಳು

ಹೊಸ ದಿಗಂತ ವರದಿ, ಚಿತ್ರದುರ್ಗ:

ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಮೀಸಲಾಗದೆ, ನಾಲ್ಕು ವರ್ಷಗಳ ಹಿಂದೆ ಗೋಶಾಲೆ ಆರಂಭಿಸಿ ಗುಜರಾತಿನ ಗೀರ್ ಮತ್ತು ಕಾಂಕ್ರೀಜ್ ತಳಿಗಳನ್ನು ಆರೈಕೆ ಮಾಡುವ ಮೂಲಕ ಗೋವುಗಳ ರಕ್ಷಣೆಗೆ ಮುಂದಾಗಿದೆ.
ಕಂದು, ಬಿಳಿ, ಬೂದು ಕಪ್ಪು ಮಿಶ್ರಿತ ಐವತ್ತು ಹಸುಗಳು, 20 ಕರುಗಳು ಈ ಗೋಶಾಲೆಯಲ್ಲಿವೆ. ನೋಡಲು ಅತ್ಯಾಕರ್ಷವಾಗಿರುವ ಗೀರ್ ಮತ್ತು ಕಾಂಕ್ರೀಜ್ ತಳಿಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹೊರಗಿನವರು ಬರುವುದುಂಟು. ದೇಶಿ ತಳಿಗಳ ಗೋಮಯದಿಂದ ಪಂಚಗವ್ಯ ಸೋಪು, ಧೂಪಗಳು, ಭರಣಿ, ಗೋಅರ್ಕ ಇವುಗಳನ್ನು ತಯಾರಿಸಲಾಗುವುದು.
ಈ ಗೋವುಗಳಿಂದ ಸಿಗುವ ಹಾಲು ಬೆಣ್ಣೆ, ತುಪ್ಪವನ್ನು ಮಾರಾಟ ಮಾಡಿ ಅವುಗಳಿಂದ ಬರುವ ಆದಾಯವನ್ನು ಗೋವುಗಳ ಸಾಕಾಣಿಕೆಗೆ ಬಳಸಲಾಗುತ್ತಿದೆ. ಆರಂಭದಲ್ಲಿ 15 ಹಸು, ನಂತರ ಮೂರು ಬಾರಿ 30 ಹಸುಗಳನ್ನು ಗುಜರಾತಿನಿಂದ ತರಲಾಗಿದೆ. 2500 ಕಿ.ಮೀ.ನಿಂದ ಒಂದು ಹಸುವನ್ನು ಇಲ್ಲಿಗೆ ತರಲು ಬಾಡಿಗೆ ಸೇರಿ 1 ಲಕ್ಷ ರೂ.ಗಳ ವೆಚ್ಚವಾಗಲಿದೆ ಎಂದು ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಭಟ್ ತಿಳಿಸಿದ್ದಾರೆ.
ಗೋವುಗಳನ್ನು ಗೋಮಾತೆ ಎಂದು ಹಿಂದೂಗಳು ಪೂಜಿಸುವುದರಿಂದ ಯಾವ ಕಾರಣಕ್ಕೂ ಗೋವುಗಳು ಕಟುಕರ ಕೈಗೆ ಹೋಗಬಾರದು. ಈ ಮಹದಾಸೆಯಿಂದ ಗೋಶಾಲೆ ತೆರೆದು ಗೋವುಗಳನ್ನು ಜೋಪಾನವಾಗಿ ರಕ್ಷಣೆ ಮಾಡುವುದು ನಮ್ಮ ಉದ್ದೇಶ. ದಿನವೂ ಗೋವುಗಳಿಗೆ ಹಸಿರು ಮೇವುಗಳನ್ನು ಹಾಕುತ್ತೇವೆ. ಇದರಿಂದ ಹಾಲಿನ ವೃದ್ದಿಯಾಗಲಿದೆ. ಯಾವುದೇ ರೀತಿಯ ರೋಗಗಳು ಹರಡಿದರೆ ತಕ್ಷಣವೇ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುವುದರಿಂದ ಇಲ್ಲಿನ ಎಲ್ಲಾ ಗೋವುಗಳು ಆರೋಗ್ಯವಾಗಿವೆ ಎಂದರು.
ಗುಜರಾತಿನ ಗೀರ್ ಮತ್ತು ಕಾಂಕ್ರೀಜ್ ತಳಿ ಹಸುಗಳಿಂದ ಪ್ರಕೃತಿಗೂ ಸಾಕಷ್ಟು ಪ್ರಯೋಜನವಾಗಲಿದೆ. ದೇವಸ್ಥಾನದ ಭಕ್ತರು ಹಾಗೂ ಗ್ರಾಹಕರುಗಳಿಂದ ಹಾಲು, ಬೆಣ್ಣೆ, ತುಪ್ಪಕ್ಕೆ ಬೇಡಿಕೆಯಿದೆ. ಗೋವುಗಳ ಉತ್ಪನ್ನಗಳನ್ನು ಮನೆ ಮನೆಗೆ ಮಾರಾಟ ಮಾಡಿ ಬರುವ ವರಮಾನವನ್ನು ಗೋ ಸೇವೆಗೆ ಬಳಸುತ್ತೇವೆ. ಉತ್ತರ ಭಾರತದ ಮೂವರು ಹಾಗೂ ಸ್ಥಳೀಯ ಇಬ್ಬರು ಗೋಶಾಲೆಯಲ್ಲಿ ಗೋವುಗಳಿಗೆ ಸಮಯಕ್ಕೆ ಸರಿಯಾಗಿ ಮೇವು ನೀರು ಒದಗಿಸುವ ಕೆಲಸದಲ್ಲಿ ತೊಡಗಿದ್ದಾರೆಂದು ಗೋವುಗಳ ಬಗ್ಗೆ ತಮಗಿರುವ ಕಾಳಜಿ ವ್ಯಕ್ತಪಡಿಸಿದರು.
ಬಿಳಿ ಬೂದು ಬಣ್ಣದ ಎರಡು ಹೋರಿಗಳು ಮಾತ್ರ ನೋಡಲು ಭಯ ಹುಟ್ಟಿಸುವಂತಿವೆ. ಅಗಲವಾದ ದಪ್ಪನೆ ಕೋಡುಗಳು ಆಕರ್ಷಣೀಯವಾಗಿವೆ. ಹೊಸಬರು ಯಾರಾದರೂ ಹತ್ತಿರ ಹೋದರೆ ಇನ್ನೇನು ತಿವಿದೇಬಿಡುತ್ತವೇನೋ ಎನ್ನುವಂತೆ ಬುಸುಗುಟ್ಟುತ್ತವೆ. ಆದರೆ ಅಷ್ಟೇ ಮೃದು ಸ್ವಭಾವ ಕೂಡ. ಇವುಗಳ ಲಾಲನೆ ಪಾಲನೆಯಲ್ಲಿ ತೊಡಗಿರುವವರೊಂದಿಗೆ ಹೊಂದಿಕೊಂಡಿವೆ. ಇಲ್ಲಿನ ಗೋವುಗಳನ್ನು ನೋಡಲು ಹೊರಗಿನಿಂದ ಬರುವ ಹೊಸಬರು ಮಾತ್ರ ದೂರವೇ ನಿಂತು ಬಣ್ಣದ ಬಣ್ಣದ ಗುಜರಾತಿನ ಗೀರ್ ಮತ್ತು ಕಾಂಕ್ರೀಜ್ ತಳಿಗಳನ್ನು ವೀಕ್ಷಿಸಿ ಆನಂದಪಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!