ಉದ್ಯಮಿಯಾಗಲು ಹಣಕ್ಕಿಂತ ಛಲ ಮುಖ್ಯ: ಸಚಿವ ನಿರಾಣಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್ 

ಉದ್ಯಮಿಯಾಗಲು ಹಣಕ್ಕಿಂತ ಛಲ ಮುಖ್ಯ. ದೃಢ ಸಂಕಲ್ಪ ಇದ್ದರೆ ಸಾಕು, ಉದ್ಯಮ ಆರಂಭಿಸಬಹುದು. ಯುವಜನತೆ ಉದ್ಯಮಿಗಳಾಗಲು ಉತ್ತೇಜನ, ಪ್ರೇರಣೆ ನೀಡಲು ತಾಂತ್ರಿಕ ಶಿಕ್ಷಣದಲ್ಲಿ ಉದ್ಯಮಶೀಲತೆ ಕುರಿತ ಪಠ್ಯಕ್ರಮ ಅಳವಡಿಸಲು ಚಿಂತನೆ ನಡೆದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು.
ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗುರುವಾರ ನಡೆದ ‘ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇರೆಯವರ ಕೈ ಕೆಳಗೆ ನೀವು ದುಡಿಯಬೇಕಿಲ್ಲ. ಛಲ ಬಿಡದೆ ಸಾಧಿಸಿದರೆ ನೀವೇ ಉದ್ಯಮ ಸ್ಥಾಪಿಸಿ ಇತರರಿಗೆ ಕೆಲಸ ನೀಡಬಹುದು. ದಕ್ಷಿಣ ಕನ್ನಡ ಬುದ್ಧಿ ಜೀವಿಗಳ ನಾಡು. ಶಿಕ್ಷಣ, ಕೈಗಾರಿಕೆ, ಬ್ಯಾಂಕಿಂಗ್ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ ಇದು. ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಸಂಪರ್ಕ ಹಾಗೂ ಉತ್ತಮ ರಸ್ತೆ ಸೇರಿಂತೆ ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ ಪ್ರದೇಶದ ಯುವ ಜನರು ಉದ್ಯಮ ಸ್ಥಾಪನೆಗೆ ಮುಂದಾಗಬೇಕು. ಅದಕ್ಕೆ ಪೂರಕವಾಗಿ ನಮ್ಮ ಇಲಾಖೆಯಿಂದ ಎಲ್ಲ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧ. ಮುಂದಿನ ಹಂತದಲ್ಲಿ ಬೆಂಗಳೂರಿನ ಕಂದಾಯ ವಿಭಾಗ 2ರಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಮಂಗಳೂರು ಮಾತ್ರವಲ್ಲದೆ ಉಡುಪಿ ಹಾಗೂ ಪುತ್ತೂರಿನ ವಿದ್ಯಾರ್ಥಿಗಳು ವೀಡಿಯೋ ಕಾನರೆನ್ಸ್ ಮೂಲಕ ಸುಮಾರು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿರುವವರ ಪೈಕಿ ಉದ್ಯಮ ಸ್ಥಾಪಿಸುವ ಆಸಕ್ತಿ ತೋರುವವರಿಗೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಒಂದು ತಿಂಗಳವರೆಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಬ್ಯಾಂಕ್ ಲೋನ್, ಪ್ರಾಜೆಕ್ಟ್ ರಿಪೊರ್ಟ್ ಸಲ್ಲಿಸುವವರೆಗೆ ಆರಂಭದಿಂದ ಕೊನೆಯವರೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಎಫ್‌ಡಿಐಗೆ ಆದ್ಯತೆ:
ವಿದೇಶಿ ನೇರ ಹೂಡಿಕೆಯಲ್ಲಿ ಒಟ್ಟು ಶೇ.42 ರಷ್ಟು ಹೂಡಿಕೆಯನ್ನು ಆಕರ್ಷಿಸುವ ಮೂಲಕ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2021-2022ರ ಹಣಕಾಸು ವರ್ಷದಲ್ಲಿ ಸತತ ಎರಡು ತ್ರೈಮಾಸಿಕಗಳಲ್ಲಿ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿದೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!