ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ತನ್ನ ರಾಜ್ಯದಲ್ಲಿ ಹೊಸ ಅಬಕಾರಿ ನೀತಿಯನ್ನು ಪರಿಚಯಿಸಲು ಹೊರಟಿದೆ. ಈ ಮೂಲಕ 5,500 ಕೋಟಿ ರೂಪಾಯಿ ಆದಾಯದ ಗುರಿಯಿಟ್ಟುಕೊಂಡಿದೆ.
ಹರಿಯಾಣ ಮತ್ತು ಇತರೆ ರಾಜ್ಯಗಳ ಮಾದರಿಯಲ್ಲಿ ಖಾಸಗಿ ಚಿಲ್ಲರೆ ವ್ಯಾಪಾರಿಗಳಿಗೆ ಮದ್ಯ ಮಾರಾಟ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ರಾಜ್ಯ ಸರ್ಕಾರವು 5,500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ನಾಯ್ಡು ಸರ್ಕಾರ ಕೂಡ ಈ ಮಾದರಿ ತರಲು ಚಿಂತನೆ ನಡೆಸಿದೆ.
ಆಂಧ್ರಪ್ರದೇಶ ಸರ್ಕಾರವು ರಾಜ್ಯಾದ್ಯಂತ 3,736 ಮದ್ಯ ಮಾರಾಟ ಮಳಿಗೆಗಳನ್ನು ಖಾಸಗೀಕರಣಗೊಳಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಹೊಸ ಮದ್ಯ ನೀತಿಯು ಇದೇ ಅಕ್ಟೋಬರ್ 12ರಿಂದ ಜಾರಿಗೆ ಬರಲಿದೆ.
ಈ ಹೊಸ ಮದ್ಯ ನೀತಿಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಮೊದಲ ವರ್ಷದಲ್ಲಿ 10 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 50 ಲಕ್ಷ ರೂ. 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಪ್ರತಿ ಮದ್ಯದ ಅಂಗಡಿಯಿಂದ 85 ಲಕ್ಷ ರೂ. ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ.
ಮದ್ಯದ ಬೆಲೆಯನ್ನು ಕೈಗೆಟುಕುವಂತೆ ಮಾಡಲು ರಾಜ್ಯ ಸರ್ಕಾರವು ಈ ಹೊಸ ಮದ್ಯ ನೀತಿಯನ್ನು ಪರಿಚಯಿಸಿದೆ. ಆಂಧ್ರಪ್ರದೇಶ ಸರ್ಕಾರ 99 ರೂಪಾಯಿಗೆ ಒಂದು ಕ್ವಾರ್ಟರ್ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಸಿಗುವ ಮದ್ಯದ ಬ್ರ್ಯಾಂಡ್ನ್ನು ಸದ್ಯದಲ್ಲಿಯೇ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಮಾದರಿಯ ಮದ್ಯವನ್ನು ಮಾರುಕಟ್ಟೆಗೆ ತರಲು ರಾಷ್ಟ್ರೀಯ ಮದ್ಯ ಪೂರೈಕೆದಾರರಿಗೆ ಸರ್ಕಾರ ಮನವಿ ಮಾಡಿಕೊಂಡಿದೆ.
ಒಟ್ಟಿನಲ್ಲಿ ದುಬಾರಿ ಬೆಲೆಯ ಕಿರುಕುಳ ನೀಡಿ ಜೇಬು ಖಾಲಿ ಮಾಡಿಕೊಂಡಿರುವ ಮಾದಕ ವ್ಯಸನಿಗಳಿಗೆ ಇನ್ಮುಂದೆ ನೆಮ್ಮದಿ ಸಿಗಲಿದೆ. ಎಪಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮದ್ಯ ದೊರೆಯಲಿದೆ.