ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ ( TVK ) ನೀಡಿದ್ದ ಆನೆಯ ಚಿಹ್ನೆಯನ್ನು ತೆಗೆಯುವಂತೆ ಬಹುಜನ ಸಮಾಜ ಪಕ್ಷ ( BSP ) ಮಾಡಿದ್ದ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.
ರಾಜಕೀಯ ಪಕ್ಷಗಳು ಬಳಸುವ ಧ್ವಜಗಳನ್ನು ನಾವು ಅನುಮೋದಿಸುವುದಿಲ್ಲ. ಪಕ್ಷದ ಹೆಸರು, ಚಿಹ್ನೆಗಳು ಮತ್ತು ರಾಷ್ಟ್ರೀಯ ಲಾಂಛನಕ್ಕೆ ಸಂಬಂಧಿಸಿದ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಆಯಾ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಅದೇ ರೀತಿ ತಮಿಳಗ ವೆಟ್ರಿ ಕಳಗಂ ಪಕ್ಷವು ಚಿಹ್ನೆಗಾಗಿ ಇನ್ನೂ ಅರ್ಜಿ ಸಲ್ಲಿಸಿಲ್ಲ. ಅಂತಹ ಅರ್ಜಿಯನ್ನು ಸಲ್ಲಿಸಿದ ನಂತರವೇ ತಾತ್ಕಾಲಿಕ ಚಿಹ್ನೆಯನ್ನು ಅನುಮತಿಸಲಾಗುವುದು ಚುನಾವಣಾ ಆಯೋಗ ತಿಳಿಸಿದೆ.
ನಟ ವಿಜಯ್ ಅವರು ಕಳೆದ ಫೆಬ್ರವರಿ 2ರಂದು ತಮ್ಮ ಹೊಸ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ ಅನ್ನು ಘೋಷಣೆ ಮಾಡಿದರು. ಇದಾದ 5 ತಿಂಗಳ ನಂತರ ಆಗಸ್ಟ್ 22ರಂದು ಚೆನ್ನೈನಲ್ಲಿರುವ ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಧ್ವಜ ಮತ್ತು ಗೀತೆಯನ್ನು ಅನಾವರಣಗೊಳಿಸಿದರು. ಧ್ವಜದ ಮೇಲೆ ಮತ್ತು ಕೆಳಭಾಗದಲ್ಲಿ ಕೆಂಪು ಬಣ್ಣವಿದ್ದು, ಮಧ್ಯದಲ್ಲಿ ಹಳದಿ ಬಣ್ಣವಿದೆ. ವಿಜಯದ ಸಂಕೇತವಾಗಿ ಎರಡು ಆನೆಗಳು ಮತ್ತು ಅಲ್ಬಿಜಿಯಾ ಲೆಬ್ಬೆಕ್ ಹೂವಿನ ಚಿತ್ರವಿದೆ.
ವಿಜಯ್ ಅವರು ಪಕ್ಷದ ಧ್ವಜ ಬಿಡುಗಡೆ ಮಾಡಿದ ಬೆನ್ನಲ್ಲೇ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಅದರಲ್ಲೂ ರಾಷ್ಟ್ರೀಯ ಪಕ್ಷ ಬಹುಜನ ಸಮಾಜ ಪಕ್ಷವು ಟಿವಿಕೆ ಧ್ವಜದಲ್ಲಿರುವ ಆನೆಯ ಚಿತ್ರವನ್ನು ತೆಗೆಯಬೇಕು ಇಲ್ಲದಿದ್ದರೆ ಚುನಾವಣಾ ಆಯೋಗವನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯ ಕಚೇರಿ ಕಾರ್ಯದರ್ಶಿ ವಕೀಲ ತಮಿಳ್ಮತಿ ಅವರು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಬಹುಜನ ಸಮಾಜ ಪಕ್ಷವು ಭಾರತದಾದ್ಯಂತ ಆನೆಯನ್ನು ಚುನಾವಣಾ ಚಿಹ್ನೆಯಾಗಿ ಬಳಸುತ್ತಿದೆ. ನಮ್ಮ ಪಕ್ಷವೂ ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ನಟ ವಿಜಯ್, ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮ ಕೈಗೊಂಡಿಲ್ಲ. ಹೊಸ ಪಕ್ಷದ ಧ್ವಜದಲ್ಲಿ ರಾಷ್ಟ್ರೀಯ ಪಕ್ಷದ ಚಿಹ್ನೆಯನ್ನು ಯಾವುದೇ ರಾಜಕೀಯ ಶಿಷ್ಟಾಚಾರವನ್ನು ಪಾಲಿಸದೇ ಬಳಸಿದ್ದಕ್ಕಾಗಿ ನಟ ವಿಜಯ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀ ಕೋರಿದರು. ಆದರೀಗ ಬಿಎಸ್ಪಿಯ ಮನವಿಯನ್ನು ಚುನಾವಣಾ ಅಯೋಗ ತಿರಸ್ಕರಿಸಿದೆ.