ರೈತರಿಗೆ ಗುಡ್ ನ್ಯೂಸ್: ಬೆಂಬಲ ಬೆಲೆಯಲ್ಲಿ ಹೆಸರು, ಸೂರ್ಯಕಾಂತಿ ಬೆಳೆ ಖರೀದಿಗೆ ಕೇಂದ್ರದಿಂದ ರಾಜ್ಯಕ್ಕೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ರಾಜ್ಯದ ರೈತರಿಂದ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಹಾಗೂ ಸೂರ್ಯಕಾಂತಿ ಬೆಳೆ ಖರೀದಿಗೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಸರು ಕಾಳು ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರ ನೆರವಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಯೋಜನೆ ಅಡಿ ಪ್ರತಿ ಕ್ವಿಂಟಾಲ್‌ಗೆ 8,682 ರೂ. (MSP) ದರದಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಜೋಶಿ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಹೆಸರಿನ ಬೆಲೆ ಕುಸಿದು ರೈತರು ಬೆಳೆದ ಬೆಳೆಗೆ ಸರಿಯಾದ ಮೌಲ್ಯ ದೊರೆಯದೇ ತೊಂದರೆ ಸಿಲುಕಿದ್ದು, ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ಸಹಾಯಕ್ಕೆ ನಿಂತಿದೆ. ಎಂಎಸ್‌ಪಿ ಅಡಿ ಹೆಸರು ಕಾಳು ಖರೀದಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು, ರೈತರ ಹೆಸರುಕಾಳು ಬೆಳೆಯನ್ನು ಬೆಲೆ ಬೆಂಬಲ ಯೋಜನೆ (Price Support Scheme (PSS)) ಅಡಿ ಖರೀದಿಗೆ ಅನುಮತಿ ನೀಡಿದೆ. 2215 ಮೆಟ್ರಿಕ್‌ ಟನ್ ಹೆಸರುಕಾಳನ್ನು ಪ್ರತಿ ಕ್ವಿಂಟಾಲ್‌ಗೆ 8,682‌ ರೂ.ನಂತೆ ಖರೀದಿ ಮಾಡಲಾಗುವುದು ಎಂದು ಸಚಿವ ಜೋಶಿ ಮಾಹಿತಿ ನೀಡಿದ್ದಾರೆ.

ಸೂರ್ಯಕಾಂತಿ ಖರೀದಿಗೂ ಅನುಮೋದನೆ
ಅದೇ ರೀತಿ ಸೂರ್ಯಕಾಂತಿ ಬೆಳೆಯನ್ನು ಕೂಡ ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 13210 ಎಂ.ಟಿ. ಸೂರ್ಯಕಾಂತಿಯನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಲಿದೆ ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ, ಕೇಂದ್ರಕ್ಕೆ ಆಗಸ್ಟ್ 21ರಂದು ಪತ್ರ ಬರೆದು ವಿನಂತಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣವರನ್ನು ಭೇಟಿ ಮಾಡಿ ಚರ್ಚಿಸಿ, ರಾಜ್ಯದ ಹೆಸರಕಾಳು ಮತ್ತು ಸೂರ್ಯಕಾಂತಿ ಬೆಳೆಗಾರರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಬೆಂಬಲ ಬೆಲೆಯಲ್ಲಿ ಹೆಸರು ಮತ್ತು ಸೂರ್ಯಕಾಂತಿ ಖರೀದಿಗೆ ಅನುಮತಿ ನೀಡುವಂತೆ ಸೂಚಿಸಿದರು. ಕೇಂದ್ರ ಸರ್ಕಾರ ಆಗಸ್ಟ್ 22ರಂದೇ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!