ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮುಂಬೈನ ಎಲ್ಲಾ ಐದು ಟೋಲ್ ಬೂತ್ ಗಳಲ್ಲಿ ಲಘು ಮೋಟಾರು ವಾಹನಗಳಿಗೆ ಸಂಪೂರ್ಣ ಟೋಲ್ ಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಸೋಮವಾರ ಘೋಷಿಸಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಇಂದು (ಅ.14) ಮಧ್ಯರಾತ್ರಿಯಿಂದ ಲಘು ಮೋಟಾರು ವಾಹನಗಳ ಮೂಲಕ ಮುಂಬೈಗೆ ಉಚಿತ ಟೋಲ್ ಪ್ರವೇಶವನ್ನು ಪಡೆಯಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದರು.
ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ. ಮುಂಬೈ ಟೋಲ್ ನಾಕಾಗಳ ಪೈಕಿ 5 ಟೋಲ್ ಗಳಲ್ಲಿ ಖಾಸಗಿ ಲಘು ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುತ್ತೇವೆ. ಸೋಮವಾರ ರಾತ್ರಿಯಿಂದಲೇ ಈ ನಿಯಮ ಜಾರಿಯಾಗಲಿದ್ದು, ಐದು ಟೋಲ್‌ಗಳ ಮೂಲಕ ಲಘು ವಾಹನಗಳು ಟೋಲ್ ಮುಕ್ತವಾಗಿ ಪ್ರವೇಶಿಸಬಹುದು.
ಲಘು ವಾಹನಗಳ ವರ್ಗದಲ್ಲಿ ಕಾರುಗಳು (ಹ್ಯಾಚ್‌ಬ್ಯಾಕ್‌ಗಳು, ಸೆಡಾನ್‌ಗಳು ಮತ್ತು ಎಸ್‌ಯುವಿಗಳು), ಜೀಪ್‌ಗಳು, ವ್ಯಾನ್‌ಗಳು, ಆಟೋ-ರಿಕ್ಷಾಗಳು, ಟ್ಯಾಕ್ಸಿಗಳು, ಡೆಲಿವರಿ ವ್ಯಾನ್‌ಗಳು ಮತ್ತು ಸಣ್ಣ ಟ್ರಕ್‌ಗಳು ಸೇರಿವೆ.
ಪ್ರತಿನಿತ್ಯ ಆರು ಲಕ್ಷಕ್ಕೂ ಹೆಚ್ಚು ವಾಹನಗಳು ಮುಂಬೈ ದಾಟುತ್ತಿದ್ದು, ಅದರಲ್ಲಿ ಶೇ.80ರಷ್ಟು ಲಘು ಮೋಟಾರು ವಾಹನಗಳಾಗಿವೆ ಎಂದು ಸರ್ಕಾರ ಹೇಳಿದೆ.
ಐದು ಟೋಲ್ ಗಳಾದ ದಹಿಸರ್, ಮುಲುಂಡ್, ವಾಶಿ, ಐರೋಲಿ ಮತ್ತು ತಿನ್ಹಾಂತ್ ನಾಕಾದಿಂದ ಟೋಲ್ ಪಾವತಿಸದೇ ಲಘು ವಾಹನಗಳು ಪ್ರವೇಶಿಸಬಹುದು. ಇನ್ನುಳಿದ ಟೋಲ್ ನಾಕಾಗಳಿಂದ 45 ರೂ.ಯನ್ನು ಪಾವತಿಸಬೇಕು.
ಲಘು ವಾಹನಗಳ ಮೂಲಕ ದಿನನಿತ್ಯ ಮುಂಬೈ ನಗರಕ್ಕೆ ಪ್ರವೇಶಿಸುವ ಜನರಿಗೆ ಇದು ಪ್ರಯೋಜನಕಾರಿ ಹಾಗೂ ಇನ್ನುಳಿದ ಟೋಲ್ ಗಳಲ್ಲಿ ಟೋಲ್ ಶುಲ್ಕದಲ್ಲಿ ವಿನಾಯಿತಿಯನ್ನು ಪಡೆಯುತ್ತಾರೆ.
ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನಮನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿರ್ಧಾರದ ಕುರಿತು ಸಂತೋಷವನ್ನು ವ್ಯಕ್ತಪಡಿಸಿದ ಅವರು, ಅ.14 ಮಧ್ಯರಾತ್ರಿಯಿಂದ ಮುಂಬೈಗೆ ಪ್ರವೇಶಿಸುವ ಎಲ್ಲಾ ಐದು ಟೋಲ್ ಗೇಟ್‌ಗಳಲ್ಲಿ ಲಘು ವಾಹನಗಳು ಟೋಲ್ ಮುಕ್ತವಾಗಿರುತ್ತವೆ. ಮುಂಬೈನಲ್ಲಿ ವಾಸಿಸುವ ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.