ಮದುವೆ ಆಗೋರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ ಮತ್ತೆ ‘ಸಪ್ತಪದಿ ಯೋಜನೆ’ಗೆ ಚಾಲನೆ

ಹೊಸದಿಗಂತ ಡಿಜಟಲ್‌ ಡೆಸ್ಕ್

ಕೊರೋನಾ ಹಿನ್ನೆಲೆ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಉಚಿತ ಸಾಮೂಹಿಕ ವಿವಾಹ – ಸಪ್ತಪದಿ ಕಾರ್ಯಕ್ರಮವನ್ನು ಮರುಚಾಲನೆಗೊಳಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಉಚಿತ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆ ಪ್ರಾರಂಭಿಸಿತ್ತು.. ವಧು ಮತ್ತು ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜೊತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿಗಳೇ ಮಾಡುವುದು ಈ ಯೋಜನೆಯ ವಿಶೇಷವಾಗಿದೆ.
ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರಲಿಲ್ಲ.
ಇದೀಗ ಮತ್ತೆ ಸಾಮೂಹಿಕ ವಿವಾಹವನ್ನು ಪ್ರಾರಂಭಿಸುವಂತೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಏಪ್ರಿಲ್‌ ಮತ್ತು ಮೇ, 2022ರ ಆಯ್ದ ಏ ದರ್ಜೆಯ ದೇವಸ್ಥಾನಗಳಲ್ಲಿ, ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ–ಸಪ್ತಪದಿ ನಡೆಸಲು ಆದೇಶಿಸಲಾಗಿದೆ.
ಏಪ್ರಿಲ್‌ 28, 2022 ಮತ್ತು ಮೇ 11 ಮತ್ತು 25, 2022ರಂದು ಆಯ್ದ ದೇವಸ್ಥಾನಗಳಲ್ಲಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಲಾಭ ಪಡೆದುಕೊಳ್ಳಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!