ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಡಿ.31 ರಂದು ಮುಂಜಾನೆ 2.40 ರವರೆಗೆ ಓಡಾಡಲಿದೆ ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹೊಸ ವರ್ಷಾಚರಣೆಯಲ್ಲಿ ತೊಡಗೋರಿಗೆ ಗುಡ್ ನ್ಯೂಸ್ ಇದ್ದು, ಡಿಸೆಂಬರ್.31 ರಂದು ಮುಂಜಾನೆ 2.40ರವರೆಗೆ ನಮ್ಮ ಮೆಟ್ರೋ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ( Bangalore Metro Rail Corporation Limited-BMRCL ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025ರ ಹೊಸ ವರ್ಷದ ಮುನ್ನಾದಿನದಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸುತ್ತಿದೆ. ಕೊನೆಯ ರೈಲು ಜನವರಿ 1, 2025 ರಂದು ಮುಂಜಾನೆ 02:00 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತವೆ ಎಂದಿದೆ.

ರೈಲುಗಳು 31 ಡಿಸೆಂಬರ್ 2024ರ ರಾತ್ರಿ 11.00 ರಿಂದ ದಿನದ ವಿಸ್ತೃತ ಸೇವಾ ಅವಧಿಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಎಂ.ಜಿ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಡಿಸೆಂಬರ್ 31, 2024 ರಂದು ರಾತ್ರಿ 11:00 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ರೈಲುಗಳು ನಿಲ್ಲುತ್ತವೆ.

ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಗಮ್ಯಸ್ಥಾನಕ್ಕೆ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು 50 ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ಬಳಸಲು ಸೂಚಿಸಲಾಗಿದೆ. ಈ ಕಾಗದದ ಟಿಕೆಟ್ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 31ನೇ ಡಿಸೆಂಬರ್ 2024ರ ಬೆಳಗ್ಗೆ 8:00 ರಿಂದ ಮುಂಗಡವಾಗಿ ಖರೀದಿಸಲು ಲಭ್ಯವಿರುತ್ತದೆ. ಸಾಮಾನ್ಯ QR ಕೋಡ್ ಟಿಕೆಟ್‌ಗಳು ಮತ್ತು ಕಾರ್ಡ್‌ಗಳು ಈ ನಿಲ್ದಾಣಗಳಿಂದ ಪ್ರಯಾಣಿಸಲು ಸಹ ಮಾನ್ಯವಾಗಿರುತ್ತವೆ.

ಯಾವುದೇ ನಿರ್ದಿಷ್ಟ ನಿಲ್ದಾಣದಲ್ಲಿ ಜನಸಂದಣಿಯನ್ನು ತಪ್ಪಿಸಲು, ಪ್ರಯಾಣಿಕರು ವೈಟ್‌ಫೀಲ್ಡ್ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ಕಡೆಗೆ ಹೋಗುವವರು ಪ್ರಯಾಣಕ್ಕಾಗಿ ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಬಳಸಬಹುದು ಮತ್ತು ಚಲ್ಲಘಟ್ಟ ಹಾಗೂ ಮಾದಾವರ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸಿಕೊಳ್ಳಬಹುದು. ನಿಗಮವು ಸಾರ್ವಜನಿಕರು ತಮ್ಮ ಪ್ರಯಾಣವನ್ನು ತಮಗೆ ಅನುಗುಣವಾಗಿ ಯೋಜಿಸಲು ಮತ್ತು ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕಾಗಿ ನಿಮ್ಮ ಸಹಕಾರವನ್ನು ನೀಡುವಂತೆ ಕೋರಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!