ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾದ ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಇಂದಿನಿಂದ ಮತ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಕೇಬಲ್ ಬದಲಾವಣೆ ಹಾಗೂ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯಿಂದಾಗಿ ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಸಂಚಾರ ವ್ಯವಸ್ಥೆ ಇಂದು ಬೆಳಿಗ್ಗೆ 11 ಗಂಟೆಯಿಂದ ಸಹಜ ಸ್ಥಿತಿಗೆ ಮರಳಿದೆ.
ಮೇ 5ರ ಬುಧವಾರ ಬೆಳಿಗ್ಗೆಯಿಂದ ಮುಚ್ಚಲ್ಪಟ್ಟಿದ್ದ ಈ ಫ್ಲೈಓವರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿದೆ. ಸುಮಾರು 32 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 1,422 ಹೊಸ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಕಾಮಗಾರಿಯ ಅಂತಿಮ ಹಂತವಾಗಿ 10ಕ್ಕೂ ಹೆಚ್ಚು ಭಾರಿ ಟ್ರಕ್‌ಗಳ ಮೂಲಕ 32 ಟನ್ ತೂಕದ ಲೋಡ್ ಟೆಸ್ಟಿಂಗ್ ನಡೆಸಲಾಗಿದ್ದು, ತಾಂತ್ರಿಕವಾಗಿ ಫ್ಲೈಓವರ್ ಸುರಕ್ಷಿತವಾಗಿದೆ ಎಂದು ದೃಢಪಟ್ಟಿದೆ.
ಕೆನ್ನಮೆಟಲ್ ವಿಡಿಯಾ ಅಪ್ ರ್‍ಯಾಂಪ್‌ನಿಂದ ಎಸ್‌ಆರ್‌ಎಸ್ ಡೌನ್ ರ್‍ಯಾಂಪ್‌ವರೆಗೆ ಸಂಚಾರ ಸ್ಥಗಿತವಾಗಿದ್ದರಿಂದ ಕಳೆದ ಮೂರು ದಿನಗಳಿಂದ ಸರ್ವಿಸ್ ರಸ್ತೆಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುತ್ತಿದ್ದರು. ಇಂದು ಫ್ಲೈಓವರ್ ಓಪನ್ ಆಗುತ್ತಿದ್ದಂತೆಯೇ ವಾಹನಗಳ ಓಡಾಟ ಚುರುಕುಗೊಂಡಿದ್ದು, ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಕೇಬಲ್‌ಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ತಡೆಯಲು NHAI ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಫ್ಲೈಓವರ್‌ನ ಆಯುಷ್ಯ ಹೆಚ್ಚಿಸಲು ಮತ್ತು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಈ ದುರಸ್ತಿ ಕಾರ್ಯ ಅತ್ಯಗತ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



