ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೋಗ ಜಲಪಾತದ ಬಳಿ ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ.
ಕಳೆದ ತಿಂಗಳು ಯೋಜನೆಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ, ಆದರೆ ಕೇಂದ್ರ ಸರ್ಕಾರದ ಅನುಮೋದನೆ ಯೋಜನೆಗೆ ಅಗತ್ಯವಿದ್ದು, ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ ಗಾಗಿ ರಾಜ್ಯ ಸರ್ಕಾರ ಕಾದು ಕುಳಿತಿದೆ.
ಪ್ರವಾಸೋದ್ಯಮ ಇಲಾಖೆ ಮತ್ತು ಜೋಗ ಅಭಿವೃದ್ಧಿ ಪ್ರಾಧಿಕಾರ (ಜೆಎಂಎ) ಜಲಪಾತದ ಬಳಿಯ ಬಂಗಲೆಗಳ ಕೆಡವಿ ಪಂಚತಾರಾ ಹೋಟೆಲ್ ನಿರ್ಮಿಸುತ್ತಿದ್ದು, 1 ಕಿ.ಮೀ ಉದ್ದದ ರೋಪ್ ವೇ ಕೂಡ ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆಯು 2.39 ಹೆಕ್ಟೇರ್ ಭೂಮಿ ಹಸ್ತಾಂತರಿಸಬೇಕಿದ್ದು, ಈ ಪೈಕಿ 1.89 ಹೆಕ್ಟೇರ್ ಭೂಮಿ ಸಾಗರ ವಿಭಾಗದಲ್ಲಿದೆ. ಅಂದುಕೊಂಡಂತೆ ಆದರೆ, ಕರ್ನಾಟಕದ ಮೊದಲ ರೋಪ್ ವೇ ಯೋಜನೆಯು 2025ರ ಜುಲೈ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಜೆಎಂಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ನಡುವೆ ಯೋಜನೆಗೆ ಕೆಲ ಅರಣ್ಯ ಅಧಿಕಾರಿಗಳು ಹಾಗೂ ತಜ್ಞರು ವಿರೋಧ ವ್ಯಕ್ತಪಡಿಸಿದ್ದು, ಯೋಜನೆಯು ಅಳಿವಿನಂಚಿನಲ್ಲಿರುವ ಸಿಂಹ ಬಾಲದ ಸಿಂಗಳಿಕಗಳ ಆವಾಸ್ಥಾನವನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ.