ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಅವಕಾಶ ನೀಡಿ ಉನ್ನತ ಶಿಕ್ಷಣ ಇಲಾಖೆ ಆದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜು ಬದಲಾಯಿಸುವ ಅವಕಾಶವನ್ನು ಉನ್ನತ ಶಿಕ್ಷಣ ಇಲಾಖೆ ನೀಡಿದೆ.

ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮೂರು, ಐದು, ಏಳನೇ ಸೆಮಿಸ್ಟರ್ಗಳ ಪ್ರವೇಶಕ್ಕೂ ಮೊದಲು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅಥವಾ ಇತರೆ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆಯು ಹೊರಡಿಸಿದೆ.

ಅದೇ ರೀತಿ ಒಂದು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿಗೆ ವರ್ಗಾವಣೆ ಬಯಸಿದಲ್ಲಿ ಯುಯುಸಿಎಂಎಸ್ ತಂತ್ರಾಂಶ ಬಳಸಿ ವರ್ಗಾವಣೆ ಹಾಗೂ ಪಾಸಾಗದೆ ಉಳಿದ ವಿಷಯಗಳನ್ನು ವರ್ಗಾವಣೆಗೊಂಡ ಕಾಲೇಜಿನಲ್ಲಿಯೇ ಮುಂದುವರೆಸಲು ಅವಕಾಶ ನೀಡಬೇಕು ಎಂದು ಹೇಳಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಎರಡು ಸೆಮಿಸ್ಟರ್ ಪೂರೈಸಿದವರು ಓದು ಅರ್ಧಕ್ಕೆ ನಿಲ್ಲಿಸಿದರೆ ಅವರಿಗೆ ಕೆಳಹಂತದ ಪದವಿ ಪ್ರಮಾಣಪತ್ರ ನೀಡಲಾಗುತ್ತದೆ. ನಾಲ್ಕು ಸೆಮಿಸ್ಟರ್ ಪೂರೈಸಿದವರಿಗೆ ಡಿಪ್ಲೊಮಾ ಪದವಿ, ಆರು ಸೆಮಿಸ್ಟರ್ ಪೂರೈಸಿದರೆ ಪದವಿ, ಎಂಟು ಸೆಮಿಸ್ಟರ್ ಪೂರೈಸಿದರೆ ಆನರ್ಸ್ ಪದವಿ ಪ್ರದಾನ ಮಾಡಲು ಸೂಚಿಸಿದೆ. ಇನ್ನು ವಿದ್ಯಾರ್ಥಿ ಬಯಸಿದರೆ ಏಕ ಕಾಲಕ್ಕೆ ಎರಡು ಪದವಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಯಾವುದೇ ಸೆಮಿಸ್ಟರ್ ನ ಮಧ್ಯದಲ್ಲಿ ವಿದ್ಯಾರ್ಥಿ ಓದುವುದನ್ನು ನಿಲ್ಲಿಸಿದರೂ ಪ್ರವೇಶ ಪಡೆದ ದಿನದಿಂದ 7 ವರ್ಷಗಳ ಒಳಗೆ ಮರು ಪ್ರವೇಶ ಪಡೆಯಬಹುದಾಗಿದೆ. ವಿದ್ಯಾರ್ಥಿ ಪಡೆದ ಕ್ರೆಡಿಟ್ ಪಾಯಿಂಟ್ಸ್ಗಳನ್ನು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ ಖಾತೆಯೊಂದಿಗೆ ಸಂಯೋಜಿಸಬೇಕು. ಈ ಪಾಯಿಂಟ್ಸ್ ವಿದ್ಯಾರ್ಥಿಗೆ ಸೂಕ್ತ ಪ್ರಮಾಣಪತ್ರ ನೀಡಲು ಸಂಬಂಧಪಟ್ಟ ವಿವಿಗಳು ಪರಿಗಣಿಸಬೇಕು. ಯುಜಿಸಿ ನಿಯಮಾವಳಿಯಂತೆ ಏಕಕಾಲದಲ್ಲಿ ಬಹುಪದವಿ ಪಡೆಯಲು ಅವಕಾಶವಿದ್ದು, ವಿದ್ಯಾರ್ಥಿಯ ಹಾಜರಾತಿ ಖಚಿತ ಪಡಿಸಿಕೊಂಡು ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!