ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಜಿಎ) ವ್ಯಾಪ್ತಿಯಲ್ಲಿ ಮೇ 16ರಿಂದ ಪ್ರತಿ ಶನಿವಾರ ‘ನನ್ನ ಖಾತೆ’ ಆಂದೋಲನ ಆರಂಭಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇಲ್ಲಿನ ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಆಂದೋಲನ ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ 50 ಕಡೆ ಕೌಂಟರ್ ತೆರೆಯಲಾಗುವುದು. ದಿನಕ್ಕೆ ಸುಮಾರು 5,000 ಜನರಿಗೆ ಸ್ಥಳದಲ್ಲೇ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ಜನರಿಗಾಗಿ ಈ ಒಂದು ಐತಿಹಾಸಿಕ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದೇವೆ. ಅದುವೇ ಭೂಮಿ ಗ್ಯಾರಂಟಿ. ಈ ಮೂಲಕ ವಂಶಪಾರಂಪರ್ಯವಾಗಿ ಬಂದ ಆಸ್ತಿ ಉಳಿಸುವ ನಿಟ್ಟಿನಲ್ಲಿ ಇ-ಖಾತಾ ಆಂದೋಲನ ಮಾಡುತ್ತಿದ್ದೇವೆ. ಭೂಮಿ ಪ್ರಾಜೆಕ್ಟ್ನಲ್ಲಿ 13,00,000 ದಾಖಲೆಗಳು ಸ್ಕ್ಯಾನ್ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಪ್ರತಿ ಪಾಲಿಕೆಗಳಲ್ಲಿ 5-10 ಕೌಂಟರ್ ಗಳನ್ನು ತೆರೆಯಲಾಗುವುದು. ದಟ್ಟಣೆ ಇರುವ ಕಡೆ ಹೆಚ್ಚು ಕೌಂಟರ್ ಗಳು ತೆರೆಯಲಾಗುವುದು. ಈ ಕುರಿತು ಜಾಹೀರಾತು, ಕಟೌಟ್, ವೆಬ್ ಸೈಟ್ ಸೇರಿದಂತೆ ಎಲ್ಲಾ ಕಡೆ ಮಾಹಿತಿ ನೀಡಲಾಗುವುದು ಎಂದರು.
ಬೆಂಗಳೂರಿನಲ್ಲಿ 23 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಇ-ಖಾತೆಗಳನ್ನು ನೀಡಲಾಗಿದೆ. ಇವುಗಳನ್ನು ಎಸ್ಎಂಎಸ್ ಹಾಗೂ ವಾಟ್ಸ್‌ಆ್ಯಪ್ ಮೂಲಕ ಪ್ರತಿಯೊಬ್ಬರಿಗೂ ಕಳುಹಿಸಿ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗ ನಾಗರಿಕರು ತಮ್ಮ ಅಂತಿಮ ಇ-ಖಾತಾದಲ್ಲಿನ ಹೆಸರು ಮತ್ತು ಆಸ್ತಿಯ ವಿಸ್ತೀರ್ಣವನ್ನು ಹೊರತುಪಡಿಸಿ, ಉಳಿದ ವಿವರಗಳನ್ನು ಆನ್ಲೈನ್ನಲ್ಲೇ ತಿದ್ದಿಕೊಳ್ಳಬಹುದು. ಯಾವುದೇ ಇ-ಖಾತಾ ಅನುಮೋದನೆ ಹಾಗೂ ತಿದ್ದುಪಡಿ ಅಧಿಕೃತ ಅನುಮತಿ ಅಗತ್ಯವಿರುವ ಮ್ಯೂಟೇಶನ್‌ಗಳು ಲಾಗಿನ್‌ಲ್ಲಿ 5 ಕೆಲಸದ ದಿನಗಳ ನಂತರ ಸ್ವಯಂಚಾಲಿತವಾಗಿ ಅನುಮೋದಿಸಲಾಗುತ್ತದೆ ಎಂದು ಹೇಳಿದರು.



