September 24, 2026
Thursday, September 24, 2026
spot_img

ವಿಜಯಪುರ, ಬಾಗಲಕೋಟೆ ಜನರಿಗೆ ಸಿಹಿ ಸುದ್ದಿ: ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಮಾರ್ಗ ಬದಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಮತ್ತು ಫಂಡರಾಪುರ ನಡುವೆ ಸಂಚರಿಸುವ ಪ್ರಸಿದ್ಧ ‘ಗೋಲಗುಂಬಜ್ ಎಕ್ಸ್‌ಪ್ರೆಸ್’ ರೈಲಿನ ಮಾರ್ಗ ಬದಲಾವಣೆಗೆ ರೈಲ್ವೆ ಮಂಡಳಿ ಶುಕ್ರವಾರ ಹಸಿರು ನಿಶಾನೆ ತೋರಿದೆ. ಈ ರೈಲು ಇನ್ನು ಮುಂದೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ಸಂಚರಿಸಲಿದ್ದು, ಇದರಿಂದ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್‌ ತಿಳಿಸಿದ್ದಾರೆ.

ಪ್ರಯಾಣದ ಸಮಯ 55 ನಿಮಿಷ ಕಡಿತ

ಹೊಸ ಬೈಪಾಸ್ ಮಾರ್ಗದಿಂದಾಗಿ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿಯಲ್ಲಿ ಬರೋಬ್ಬರಿ 55 ನಿಮಿಷಗಳ ಕಾಲ ಉಳಿತಾಯವಾಗಲಿದೆ. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣ ಅವರ ಸಕಾರಾತ್ಮಕ ಸ್ಪಂದನೆಗೆ ಸಚಿವರು ಧನ್ಯವಾದ ಅರ್ಪಿಸಿದ್ದಾರೆ.

ಹೊಸ ನಿಲ್ದಾಣಗಳ ವಿವರ

ಬೈಪಾಸ್ ಮಾರ್ಗ ಅನ್ವಯಿಸುವುದರಿಂದ ಗೋಲಗುಂಬಜ್ ಎಕ್ಸ್‌ಪ್ರೆಸ್ ಇನ್ನು ಮುಂದೆ ಹುಬ್ಬಳ್ಳಿ ಮತ್ತು ಗದಗ ನಗರದ ಮುಖ್ಯ ನಿಲ್ದಾಣಗಳ ಒಳಗೆ ಹೋಗುವುದಿಲ್ಲ. ಬದಲಾಗಿ, ಸಾರ್ವಜನಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ದಕ್ಷಿಣ ಮತ್ತು ಗದಗ ಬೈಪಾಸ್ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಇತರ ರೈಲ್ವೆ ಬೇಡಿಕೆಗಳು

ಪ್ರಸ್ತುತ ವಾರದಲ್ಲಿ ಎರಡು ದಿನ ಓಡಾಡುತ್ತಿರುವ ವಿಜಯಪುರ-ಬೆಂಗಳೂರು ವಿಶೇಷ ರೈಲನ್ನು ಕಾಯಂ ಮಾಡಬೇಕು ಮತ್ತು ಮೈಸೂರು-ಫಂಡರಾಪುರ ನಡುವೆ ಶೀಘ್ರದಲ್ಲೇ ಮತ್ತೊಂದು ಹೊಸ ರೈಲು ಸೇವೆ ಆರಂಭಿಸಬೇಕು ಎಂದು ರಾಜ್ಯ ಸರ್ಕಾರವು ರೈಲ್ವೆ ಇಲಾಖೆಗೆ ಮತ್ತೊಮ್ಮೆ ಒತ್ತಾಯಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !