ಗುಡ್ ನ್ಯೂಸ್ | ಕುನೋ ಅರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ‘ಗಾಮಿನಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ‘ಗಾಮಿನಿ’ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ. ಇದೀಗ ಚೀತಾ ಸಂತತಿ 26ಕ್ಕೆ ಏರಿಕೆಯಾಗಿದೆ.

ಈ ಕುರಿತು ಕೇಂದ್ರ ಸಚಿವ ಭೂಪೇಂದರ್ ಯಾದವ್ ಮಾಹಿತಿ ನೀಡಿದ್ದು, ಪ್ರಾಜೆಕ್ಟ್‌ ಚೀತಾದಡಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ತಂದಿರುವ ಚೀತಾಗಳು ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ. ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಆಫ್ರಿಕಾದಿಂದ ತಂದ ಚೀತಾಗಳ ಪೈಕಿ ಗಾಮಿನಿ ಅನ್ನೋ ಚೀತಾ 5 ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಆಫ್ರಿಕಾದಿಂದ ಭಾರತಕ್ಕೆ ಬಂದ ಚೀತಾಗಳ ಇಲ್ಲಿ ಒಟ್ಟು 13 ಮರಿಗಳಿಗೆ ಜನ್ಮ ನೀಡಿದೆ ಎಂದು ಹೇಳಿದ್ದಾರೆ.

ಕುನೋ ರಾಷ್ಟ್ರೀಯ ಅರಣ್ಯ ಸಿಬ್ಬಂದಿಗಳ ಆರೈಕೆ, ಅರಣ್ಯದಲ್ಲಿ ಚೀತಾಗಳಿಗೆ ಯಾವುದೇ ಒತ್ತಡವಿಲ್ಲದ ವಾತಾವರಣ ನಿರ್ಮಿಸಿದ ಕಾರಣ ಅವುಗಳ ಸಂತತಿ ಹೆಚ್ಚಾಗಿದೆ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ.

ಈ ವರ್ಷದ ಜ.20ರಂದು ನಮೀಬಿಯಾದಿಂದ ತಂದಿರುವ ಜ್ವಾಲಾ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಇದಕ್ಕೂ ಮೊದಲು ಅದೇ ತಿಂಗಳಲ್ಲಿ ಆಶಾ ಅನ್ನೋ ಚೀತಾ 3 ಮರಿಗಳಿಗೆ ಜನ್ಮ ನೀಡಿತ್ತು.

ಭಾರತದಲ್ಲಿ ನಶಿಸಿ ಹೋಗಿರುವ ಚೀತಾಗಳ ಸಂತತಿ ಬೆಳೆಸಲು ಹಾಗೂ ವನ್ಯಜೀವಿ ಸಮತೋಲನ ಕಾಪಾಡಿಕೊಳ್ಳಲು ಪ್ರಾಜೆಕ್ಟ್ ಚೀತಾ ಯೋಜನೆಯಡಿ ಆಫ್ರಿಕಾದಿಂದ ಚೀತಾಗಳನ್ನು ತರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!