ನಮ್ಮದು ಜಾತಿ ಮಠವಲ್ಲ, ಜಾತ್ಯತೀತ ಮಠ: ಶಿವಲಿಂಗಾನಂದ ಸ್ವಾಮೀಜಿ

ಹೊಸದಿಗಂತ ವರದಿ,ಚಿತ್ರದುರ್ಗ :

ನಮ್ಮದು ಜಾತಿ ಮಠವಲ್ಲ, ಜಾತ್ಯತೀತ ಮಠ. ಇಲ್ಲಿಗೆ ಬರುವವರೆಲ್ಲರನ್ನು ನಾವು ಗೌರವದಿಂದ ಕಾಣುತ್ತೇವೆ. ನಮ್ಮಲ್ಲಿ ಯಾವುದೇ ಜಾತಿಯ ಸೋಂಕು ಇಲ್ಲ. ಇಲ್ಲಿ ಎಲ್ಲರೂ ಒಂದೇ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ನಗರದ ಕಬೀರಾನಂದಾಶ್ರಮದ ವತಿಯಿಂದ ನಡೆದ ೯೪ನೇ ಮಹಾ ಶಿವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಜಾತಿಗೊಂದು ಮಠ ಇದೆ. ಆದರೆ ನಮ್ಮ ಆಶ್ರಮ ಯಾವುದೇ ಜಾತಿಗೆ ಸೇರಿಲ್ಲ. ಇಲ್ಲ ಎಲ್ಲಾ ಜಾತಿಯವರು ಭಕ್ತರಾಗಿದ್ದಾರೆ. ಇಲ್ಲಿ ಎಲ್ಲರೂ ನಮ್ಮವರೇ ಆಗಿದ್ದಾರೆ. ಇಲ್ಲಿ ಸಿದ್ದಾರೂಢ ಅಜ್ಜನವರ ಸೇವೆಯೊಂದೆ ಗುರಿಯಾಗಿದೆ. ನಮ್ಮಲ್ಲಿ ಅನ್ನದಾಸೋಹ, ಜ್ಞಾನದಾಸೋಹ ಹಾಗೂ ಧರ್ಮ ದಾಸೋಹ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮವೂ ಸಿದ್ದಾರೂಢ ಶ್ರೀಗಳ ತಪ್ಪಸ್ಸಿನ ಮಹಿಮೆಯಿಂದ ನಡೆಯುತ್ತಿದೆ ಎಂದರು.

ಈ ಆಶ್ರಮ ಗೋಶಾಲೆ ನಡೆಸುವ ಸಲುವಾಗಿ ಆರಂಭಿಸಲಾಗಿತ್ತು. ಸಿದ್ದರೂಢರು ಗೋಸಂಪತ್ತನ್ನು ರಕ್ಷಣೆ ಮಾಡಲು ಬಂದವರಾಗಿದ್ದರು. ಇಲ್ಲಿ ಮಠವನ್ನು ನಿರ್ಮಾಣ ಮಾಡಬೇಕೆಂದು ಬಂದವರಲ್ಲ. ಇಲ್ಲಿಗೆ ಬರುವವರನ್ನು ನಿಮ್ಮ ಜಾತಿ ಯಾವುದೆಂದು ಕೇಳಲಿಲ್ಲ. ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿ ವ್ಯವಹಾರಿಕವಾಗಿ ಏನೂ ಇಲ್ಲ. ಎಲ್ಲವನ್ನು ಉತ್ತಮ ದೃಷ್ಟಿಯಿಂದ ಮಾಡಲಾಗುತ್ತಿದೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್‌ನ ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಂ ಮಾತನಾಡಿ, ಮನೆಯಲ್ಲಿ ತಾಯಂದಿರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅವರು ಅಭ್ಯಾಸ ಮಾಡುವಾಗ ನೀವು ಟಿ.ವಿ. ನೋಡುವುದು ಮಾಡಬೇಡಿ. ಇದರಿಂದ ಮಕ್ಕಳಿಎಗ ತೊಂದರೆಯಾಗುತ್ತದೆ. ನೀವೂ ಸಹ ಅವರ ಜೊತೆಯಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ಅವರಿಗೂ ಸ್ಪೂರ್ತಿ ಬಂದಂತಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಮಾಜಕ್ಕೆ ಅಂತಕಕಾರಿ ವಿಷಯವಾಗಿದೆ. ಮನೆಯಲ್ಲಿ ಆಗುವ ಸಣ್ಣ-ಪುಟ್ಟ ವಿಚಾರಗಳಿಗೆಲ್ಲ ಗಲಾಟೆ ಮಾಡಿಕೊಳ್ಳದೆ ಹಿರಿಯನ್ನು ಗೌರವದಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಅವರಿಗೂ ಸಹಾ ಸಂತೋಷವಾಗುತ್ತದೆ. ಚಿಕ್ಕವರಿದ್ದಾಗ ಅವರು ನಿಮ್ಮನ್ನು ಸಾಕಿ ಸಲಹಿದ್ದಾರೆ. ಹೆತ್ತವರ ಋಣ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಇಳಕಲ್ಲಿನ ಅವಧೂತರ ಮಠದ ಮಾತೋಶ್ರೀ ಶರಣಮ್ಮ ತಾಯಿ, ಕೃಷ್ಣಾನಂದ ಶ್ರೀಗಳು, ೯೪ನೇ ಶಿವರಾತ್ರಿ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸಿದ್ದವ್ವನಹಳ್ಳಿ ಪರಮೇಶ್, ಸದಸ್ಯರಾದ ಓಂಕಾರ್, ಉತ್ಸವ ಸಮಿತಿ ಗೋಪಾಲಸ್ವಾಮಿ ನಾಯ್ಕ್, ನಗರಸಭಾ ಸದಸ್ಯರಾದ ವೆಂಕಟೇಶ್ ಭಾಗವಹಿಸಿದ್ದರು. ಸುಮನ ಪ್ರಾರ್ಥಿಸಿ, ಈರಣ್ಣ ಸ್ವಾಗತಿಸಿದರು. ಮುರುಗೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!