ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಭೀಕರ ಪ್ರವಾಹ ತಲೆದೋರಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಾರು ಹಳ್ಳಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಸಾವು-ನೋವುಗಳು ಸಂಭವಿಸಿರುವ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ನೆರೆ ಪರಿಸ್ಥಿತಿಯ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಕಳವಳ ಹಂಚಿಕೊಂಡಿರುವ ಅವರು, ‘ಬಿಹಾರದಲ್ಲಿ ಪ್ರತಿ ವರ್ಷವೂ ಈ ದುರಂತ ಮರುಕಳಿಸುತ್ತಿದೆ. ಜನರು ವಲಸೆ ಹೋಗುವಂತಾಗಿದೆ, ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕಳೆದ 17 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ‘ಡಬಲ್ ಇಂಜಿನ್ ಸರ್ಕಾರ’ ಈ ವಾರ್ಷಿಕ ದುರಂತವನ್ನು ತಡೆಯಲು ಏನು ಮಾಡಿದೆ? ನೆಲದ ಮಟ್ಟದಲ್ಲಿ ಏನು ಬದಲಾವಣೆಯಾಗಿದೆ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಬಿಹಾರದ ಜನತೆಗೆ ಕೇವಲ ವಾರ್ಷಿಕ ಭರವಸೆ ಹಾಗೂ ತಾತ್ಕಾಲಿಕ ಪರಿಹಾರ ಸಾಲದು, ಅವರಿಗೆ ಈ ಸಮಸ್ಯೆಯಿಂದ ಮುಕ್ತಿ ನೀಡುವ ಶಾಶ್ವತ ಪರಿಹಾರ ಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಹೆಚ್ಚಿದ ರಾಜಕೀಯ ವಾಗ್ದಾಳಿ
ರಾಹುಲ್ ಗಾಂಧಿ ಅವರಷ್ಟೇ ಅಲ್ಲದೆ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಹಾಗೂ ಸ್ವತಂತ್ರ ಸಂಸದ ಪಪ್ಪು ಯಾದವ್ ಕೂಡ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಮಳೆಯಿಂದಾಗಿ ಬೆಳೆ ಕಳೆದುಕೊಂಡ ರೈತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ, ರಾಜ್ಯದಲ್ಲಿ ಸಾಲ ಮತ್ತು ನಿರುದ್ಯೋಗ ಹೆಚ್ಚಾಗಿದೆ ಎಂದು ತೇಜಸ್ವಿ ಯಾದವ್ ಟೀಕಿಸಿದ್ದಾರೆ. ಇತ್ತ ಪಪ್ಪು ಯಾದವ್ ಅವರು ಪ್ರವಾಹ ಪೀಡಿತ ಛಾಪ್ರಾ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ, ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿ, ಬಿಹಾರಕ್ಕೆ ತಕ್ಷಣ 5,000 ಕೋಟಿ ರೂ.ಗಳ ವಿಶೇಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಈ ನಡುವೆ, ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ವಿಪತ್ತು ನಿರ್ವಹಣಾ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಸ್ತೆ ಸಂಪರ್ಕ ಕಡಿತಗೊಂಡಿರುವ ಛಾಪ್ರಾ ಸೇರಿದಂತೆ ಸರನ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳ ಮೂಲಕ ಆಹಾರ ಪ್ಯಾಕೆಟ್ಗಳು ಮತ್ತು ಒಣ ರೇಷನ್ ಅನ್ನು ಯಶಸ್ವಿಯಾಗಿ ಏರ್-ಡ್ರಾಪ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.



