ರಾಜೀನಾಮೆ ದಿನವೇ ಮಾಲ್ಡೀವ್ಸ್‌ ಗೆ ಗೋಟಬಾಯಾ ಪಲಾಯನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮ್ಮ ನಿರೀಕ್ಷಿತ ರಾಜೀನಾಮೆಗೂ ಮುಂಚೆಯೇ ಶ್ರೀಲಂಕಾ ಅಧ್ಯಕ್ಷ ಗೋಟಬಾಯಾ ರಾಜಪಕ್ಸೆ ಮಾಲ್ಡೀವ್ಸ್‌ ಗೆ ಪಲಾಯನ ಮಾಡಿದ್ದಾರೆ. ಅಲ್ಲಿಅವರನ್ನು ಮಾಲ್ಡೀವ್ಸ್‌ ನ ಸ್ಪೀಕರ್‌ ಮೊಹಮ್ಮದ್ ನಶೀದ್ ಬರಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ. ಗೋಟಬಾಯಾ ಜೊತೆಯಲ್ಲಿ ಅವರ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರು ಇದ್ದರು ಎನ್ನಲಾಗಿದೆ.

ಗೋಟಬಾಯಾ ಅವರು ಮಾಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3 ಗಂಟೆಗೆ ಬಂದಿಳಿದಿದ್ದಾರೆ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಹಜ್ ಯಾತ್ರೆಯಲ್ಲಿರುವ ಕಾರಣ ಸ್ಪೀಕರ್ ನಶೀದ್ ಅವರನ್ನು ಬರಮಾಡಿಕೊಂಡರು. ಮಂಗಳವಾರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರಿಗೆ ಯುಎಸ್ ವೀಸಾ ನಿರಾಕರಿಸಲಾಗಿದೆ ಎಂದು ಕೆಲ ಉನ್ನತ ಮೂಲಗಳು ತಿಳಿಸಿವೆ.

ಶ್ರೀಲಂಕಾದಲ್ಲಿ ತಲೆದೂರಿರುವ ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದಿರುವ ಪ್ರತಿಭಟನಾಕರರು ಗೋಟಬಾಯಾ ರಾಜೀನಾಮೆಗೆ ಆಗ್ರಹಿಸಿ ಅವರ ಅಧಿಕೃತ ನಿವಾಸದ ಮೇಲೆ ದಾಳಿಮಾಡಿದ ನಂತರ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರಾಜಪಕ್ಸೆಗೆ ದೇಶವನ್ನು ತೊರೆಯಲು ಅನುಮತಿ ನಿರಾಕರಿಸಲಾಗಿದೆ ಎಂಬ ವರದಿಗಳನ್ನು ಶ್ರೀಲಂಕಾ ವಲಸೆ ಅಧಿಕಾರಿಗಳ ಸಂಘ (SLIEOA) ನಿರಾಕರಿಸಿದೆ. ಇನ್ನೂ ಉನ್ನತ ಹುದ್ದೆಯಲ್ಲಿರುವ ಅಧ್ಯಕ್ಷರು ದೇಶವನ್ನು ತೊರೆಯದಂತೆ ತಡೆಯಲು ವಲಸೆ ಅಧಿಕಾರಿಗಳಿಗೆ ಯಾವುದೇ ಕಾನೂನು ಅಧಿಕಾರವಿಲ್ಲ ಎಂದು ಸಂಘ ಹೇಳಿದೆ. ಹೊರಡುವ ಮುನ್ನ ಗೋತಬಯ ಅವರು ಸ್ಪೀಕರ್‌ಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ ಎಂದು ಕೆಲ ದೃಢೀಕರಿಸದ ವರದಿಗಳು ತಿಳಿಸಿವೆ.

ಮಾಲ್ಡೀವ್ಸ್‌ಗೆ ತೆರಳಲು ವಲಸೆ, ಕಸ್ಟಮ್ಸ್ ಮತ್ತು ಇತರ ಕಾನೂನುಗಳಿಗೆ ರಕ್ಷಣಾ ಸಚಿವಾಲಯದ ಸಂಪೂರ್ಣ ಅನುಮೋದನೆಯ ನಂತರ ವಿಮಾನವನ್ನು ಅವರಿಗೆ ಒದಗಿಸಲಾಗಿದೆ ಎಂದು ಶ್ರೀಲಂಕಾದ ವಾಯುಪಡೆಯ ಮಾಧ್ಯಮ ನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!