ನಾಳೆಯಿಂದ ಮೂಡುಬಿದಿರೆಯಲ್ಲಿ ‘ಆಳ್ವಾಸ್ ವಿರಾಸತ್ ವೈಭವ’ದ ಗೌಜಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

  • ದಿಗಂತ ವಿಶೇಷ: ಹರೀಶ್ ಕೆ.ಆದೂರು

ಹೊತ್ತು ಕಂತುವ ಹೊತ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಮೇಳೈಸಲಿದೆ ಆಳ್ವಾಸ್ ವಿರಾಸತ್ ವೈಭವ.

ಹೌದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಳೆಯಿಂದ ಐದು ದಿನಗಳ ಕಾಲ ವೈಭವದ ಸಾಂಸ್ಕೃತಿಕ ಉತ್ಸವ ‘ನ ಭೂತೋ’ ಎಂಬಂತೆ ನಡೆಯಲಿದೆ. ಇದು ವರ್ಷಂಪ್ರತಿಯೂ ಇದೇ ರೀತಿ ಆಗುತ್ತಿರುವುದು ವಿಶೇಷವೇ ಸರಿ!

ವಿದ್ಯಾಗಿರಿಯ ನೂರೈವತ್ತು ಎಕ್ಕರೆ ಆವರಣ ಇದಕ್ಕಾಗಿ ಸಂಪೂರ್ಣ ಸಜ್ಜಾಗಿದೆ. ವಿದ್ಯುತ್ ದೀಪಾಲಂಕಾರ ಒಂದೆಡೆಯಾದರೆ ಸಹಸ್ರ ಸಹಸ್ರ ಸಂಖ್ಯೆಯ ಹೂವಿನ ಗಿಡಗಳು ಮೈದುಂಬ ಹೂವುಗಳಿಂದ ಶೃಂಗಾರಗೊಂಡು ನೋಡುಗರನ್ನು ಮೋಡಿ ಮಾಡುತ್ತಿದೆ. ಎಲ್ಲಿ ನೋಡಿದರಲ್ಲಿ ಹೂವಿನ ಅಲಂಕಾರ…ವಿವಿಧ ಕಲಾಕೃತಿಗಳು…ಒಂದನ್ನೊಂದು ಮೀರಿಸುವ ದೃಶ್ಯ ವೈವಿಧ್ಯ ಇದೆಲ್ಲವೂ ವಿರಾಸತ್ ವೈಭವದಲ್ಲಿ ಕಾಣಸಿಗಲಿದೆ.

ಉದ್ಘಾಟನೆ: ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಡಿ.10ರ ಮಂಗಳವಾರ ಸಂಜೆಯ ವೇಳೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೇವಲ ಒಂದು ಗಂಟೆಗಳ ಕಾಲ ಮಾತ್ರ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ, ಸೇರಿದಂತೆ ಗಣ್ಯರು ಉಪಸ್ಥಿತರಿರುವರು.

ಭವ್ಯ ಸಾಂಸ್ಕೃತಿಕ ಮೆರವಣಿಗೆ
ಸಂಜೆ 6.35ರಿಂದ ರಾತ್ರಿ 8.30ರ ವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಜೊತೆಗೆ ರಥಾರತಿ ನಡೆಯಲಿದೆ. 150 ಕ್ಕಿಂತಲೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳ 4000 ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಕಲಾವಿದರು ಮಾತ್ರವಲ್ಲ, ನಮ್ಮ ರಾಜ್ಯ- ಜಿಲ್ಲೆಯ ಕಲಾವಿದರ ಜೊತೆಗೆ ಆಳ್ವಾಸ್ ಸಂಸ್ಥೆಯ 400ಕ್ಕೂ ಅಧಿಕ ಸಾಂಸ್ಕೃತಿಕ ಕಲಾವಿದ ವಿದ್ಯಾರ್ಥಿಗಳು ಪ್ರದರ್ಶನ ನೀಡುತ್ತಿರುವುದು ವಿಶೇಷವೇ ಸರಿ.

ಕಳೆದ ಬಾರಿಯಂತೆ ಈ ಬಾರಿಯೂ ರಥ ಸಂಚಾರವು ವಿರಾಸತ್ ವಿಶೇಷವಾಗಿದೆ. ವೇದಘೋಷಗಳು, ಪುಷ್ಪಪಲ್ಲಕ್ಕಿ, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥಸಂಚಲನ ಮತ್ತು ರಥಾರತಿ ನಡಯಲಿದೆ.

ಮುಖ್ಯ ವೇದಿಕೆಯ ಮುಂಭಾಗದಲ್ಲಿ ಉದ್ಘಾಟನೆ ಸಂದರ್ಭದಲ್ಲಿ ಒಂದು ಪಾರ್ಶ್ವದಿಂದ ಮತ್ತೊಂದು ಪಾರ್ಶ್ವಕ್ಕೆ ಸಾಂಸ್ಕೃತಿಕ ರಥವನ್ನು ಎಳೆಯಲಾಗುತ್ತದೆ. ಈ ರಥದಲ್ಲಿ ಲೋಕ ಮಾರ್ಗದರ್ಶಕರಾದ ಮರ್ಯಾದಾ ಪುರುಷೋತ್ತಮ ಶ್ರೀರಾಮ ಹಾಗೂ ಶ್ರೀಕೃಷ್ಣರ ಮೂರ್ತಿ ಇರಲಿವೆ. ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮೀ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಇರಲಿದ್ದಾರೆ. ರಥದ ಜೊತೆ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಮಾರೋಪದ ದಿನ ರಥವು ಮತ್ತೆ ಸ್ವಸ್ಥಾನಕ್ಕೆ ರಥ ಸಂಚರಿಸಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಲಿದ್ದಾರೆ. ವಿರಾಸತ್ ವೈಭವದ ಕೊನೆಯ ದಿನ ರಥ ಸ್ವಸ್ಥಾನಕ್ಕೆ ಕರೆತರುವ ಕಾರ್ಯವೂ ನಡೆಯಲಿದೆ.

ರಾಷ್ಟ್ರೀಯ- ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರ ಸಾವಿರಕ್ಕೂ ಅಧಿಕ ಛಾಯಾಚಿತ್ರಗಳು, ಈ ಬಾರಿಯ ವಿರಾಸತ್‌ಗೆ ಆಹ್ವಾನಿಸಿದ 100ಕ್ಕೂ ಅಧಿಕ ಕಲಾಕೃತಿಗಳು ಲಲಿತಕಲಾ ಮೇಳದ ಸೊಬಗನ್ನು ಹೆಚ್ಚಿಸಲಿವೆ. ಮಹಿಳೆಯರಿಗೆ ಕಣ್ಮನ ಸೆಳೆಯುವ ಕೈಮಗ್ಗಗಳ ಸೀರೆಯ ಪ್ರದರ್ಶನವು ಈ ಬಾರಿಯ ವಿಶೇಷ. ಸುಮಾರು 30ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ಆಭರಣಗಳ ಮಳಿಗೆಗಳು ಸೌಂದರ್ಯವನ್ನೂ ಹೆಚ್ಚಿಸಲಿವೆ.

ತುಳುನಾಡಿನ ಗುತ್ತಿನ ಮನೆಯ ಪರಿಕಲ್ಪನೆಯಲ್ಲಿ ಕೃಷಿಸಿರಿ ಮೇಳದ ಆವರಣವನ್ನು ಸಜ್ಜುಗೊಳಿಸಲಾಗಿದೆ. ಸುಮಾರು 650 ಮಳಿಗೆಗಳಿವೆ. ವಿದ್ಯಾಗಿರಿಯ ಆವರಣದ ತುಂಬಾ ಸುಮಾರು 2.5 ಲಕ್ಷಕ್ಕೂ ಅಧಿಕ ಹೂವಿನಗಿಡಗಳು, 500ಕ್ಕೂ ಹೆಚ್ಚು ಕಲಾಕೃತಿಗಳಿದ್ದು, ವಿದ್ಯಾಗಿರಿಯ ಆವರಣದ ಸುತ್ತಲೂ ಇರುವ ರಾಜಮಾರ್ಗದ ಅಂದವನ್ನು ಈ ಹೂವಿನ ಗಿಡಗಳು ಹೆಚ್ಚಿಸಿವೆ. ಡಿ.10 ರಿಂದ 14ರವರೆಗೆ ವಿವಿಧ ಮೇಳಗಳ ಜೊತೆಗೆ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದು, ಡಿ.15ರ ಭಾನುವಾರದ ಪೂರ್ಣ ದಿನವನ್ನು ಕೇವಲ ಮೇಳಗಳಿಗಾಗಿಯೇ ಮೀಸಲಿಡಲಾಗಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!