ಹೊಸದಿಗಂತ ವರದಿ,ಮೈಸೂರು:
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2023 ರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ‘ಜನಪ್ರಿಯ ಆಹಾರ ಮೇಳವನ್ನು’ ಅ. 15. ರಿಂದ 22 ರ ವರೆಗೆ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.
ಈ ಬಾರಿಯ ದಸರಾದಲ್ಲಿ ಒಂದು ಸ್ಥಳದಲ್ಲಿ ಮಾತ್ರ ಆಹಾರ ಮೇಳ ನಡೆಸುತ್ತಿರುವ ಕಾರಣ ಎಲ್ಲಾ ವರ್ಗದ ಜನರ ಅಭಿರುಚಿಗಳನ್ನು ಗಮನದಲ್ಲಿರಿಸಿಕೊಂಡು ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಉಣಬಡಿಸಲು ಉದ್ದೇಶಿಸಲಾಗಿದೆ. ಆಹಾರ ಮೇಳದಲ್ಲಿ ದೇಶಿಯ ಮತ್ತು ಖಂಡಾAತರ ಆಹಾರ ಪದ್ಧತಿಯ ಜೊತೆ ಪ್ರಾದೇಶಿಕ ಮತ್ತು ಹೊರ ರಾಜ್ಯಗಳ ವೈವಿಧ್ಯದ ಉಟೋಪಚಾರಗಳನ್ನು ಅಳವಡಿಸಲಾಗುವುದು. ಜನರ ಸಮಕಾಲಿನ ಆಹಾರ ಅಭ್ಯಾಸಗಳನ್ನು ಮತ್ತು ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿಕೊಂಡು ಸಹಜ ಮತ್ತು ನೈಸರ್ಗಿಕ ಹಾಗೂ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಕಾಯಿ ಪಲ್ಯಗಳಿಂದ ತಯಾರಿಸಿದ ಅಡುಗೆಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಆಹಾರ ಮೇಳದಲ್ಲಿ ಉಣಬಡಿಸಲು ಉದ್ದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಸಿರಿಧಾನ್ಯ ಬೆಳೆಗಾರರು, ಸಹಜ ಮತ್ತು ನೈಸರ್ಗಿಕ ಕೃಷಿಕರು, ಸಾವಯವ ಕೃಷಿಕರು ಹಾಗೂ ಸಿರಿಧಾನ್ಯ ಬೆಳೆಗಾರರ ಸಂಘಗಳು ಮತ್ತು ಒಕ್ಕೂಟಗಳು ಆಹಾರ ಮೇಳಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಸಿರಿಧಾನ್ಯ ಅಡುಗೆ ತಯಾರಿಸಲು, ಸಹಜ ಮತ್ತು ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು ಮತ್ತು ತರಕಾರಿ ಮಾರಾಟಗಾರರುಗಳಿಗೆ ಎರಡು ಆಹಾರ ಮೇಳಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ ಆಹಾರ ಪದ್ಧತಿ, ಉತ್ತರ ಕರ್ನಾಟಕ ಆಹಾರ ಪದ್ಧತಿ, ಟಿಬೆಟಿಯನ್ ಆಹಾರ ಪದ್ಧತಿ, ಹೊರ ರಾಜ್ಯದ ಆಹಾರ ಪದ್ಧತಿಯಡಿಯಲ್ಲಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, ಆಂಧ್ರ ಶೈಲಿ, ಕೇರಳ ಶೈಲಿ, ತಮಿಳುನಾಡು ಶೈಲಿ, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ ಶೈಲಿಯ ಜೊತೆಗೆ ಅಂತರ್ ರಾಷ್ಟ್ರೀಯ ಚೈನೀಸ್ ಆಹಾರ ಪದ್ಧತಿ ಶೈಲಿ, ಇಟಾಲಿಯನ್ ಆಹಾರ ಪದ್ಧತಿ ಶೈಲಿ, ಫ್ರೆಂಚ್ ಆಹಾರ ಪದ್ಧತಿ ಹಾಗೂ ಆಫ್ರಿಕನ್ ಆಹಾರ ಪದ್ಧತಿಯಡಿಯಲ್ಲಿ ಆಹಾರ ತಯಾರಿಸುವ ಅಡುಗೆಗಳು ಮತ್ತು ಸಿರಿಧಾನ್ಯ ಮತ್ತು ಸಹಜ ಹಾಗೂ ಸಾವಯವ ಧಾನ್ಯಗಳು ಮತ್ತು ತರಕಾರಿಗಳಲ್ಲಿ ಅಡುಗೆಗಳನ್ನು ನೋಡಿ, ಸವಿಯಬಹುದಾಗಿದೆ.