ಪ್ರಜಾಪ್ರಭುತ್ವದ ಸಾಕಾರಕ್ಕೆ ದೇವರಾಜ ಅರಸರ ಆಡಳಿತ ಮಾದರಿ: ಡಾ.ಹೆಚ್.ಸಿ.ಮಹದೇವಪ್ಪ

ಹೊಸ ದಿಗಂತ ವರದಿ, ಮೈಸೂರು:

ಯಾವುದೇ ಜಾತಿ ಹಾಗೂ ಹಣದ ಬೆಂಬಲವಿಲ್ಲದೆ ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿ ದೇಶ ಮುನ್ನಡೆಸುವುದನ್ನು ದೇವರಾಜ ಅರಸು ತಮ್ಮ ಆಡಳಿತದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸರ 108ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅರಸು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಭಾರತದ ರಾಜಕೀಯ ಇಂದು ಜಾತಿ, ಹಣದ ಮೇಲೆ ನಿಂತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ, ಗೊಂದಲ ಸೃಷ್ಟಿ ಮಾಡಿ, ಸಂವಿಧಾನದ ಆಶಯಗಳಿಗೆ ಭಂಗ ಉಂಟುಮಾಡುತ್ತಿರುವ ಸಂದರ್ಭದಲ್ಲಿ ರಾಜಕೀಯ ಅಧಿಕಾರಿವು ಹಣ ಮತ್ತು ಜಾತಿ ಬಲವುಳ್ಳವರ ಕೈಗೆ ಸಿಗದಂತೆ ಎಚ್ಚರವಹಿಸಬೇಕು ಎಂದು ಸಂದೇಶ ನೀಡಿದರು.

ದೇಶದ ಬೆನ್ನೆಲುಬಾದ ರೈತರ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅರಸರು, ಗ್ರಾಮೀಣ ಬದುಕಿನ ಎಲ್ಲಾ ಮಜಲುಗಳನ್ನು ಅರ್ಥಮಾಡಿಕೊಂಡಿದ್ದರು. ಸಾಮಾಜಿಕ ಹೋರಾಟ, ಸಂಘರ್ಷ, ಸ್ವಾತಂತ್ರ್ಯ ಚಳುವಳಿಯೊಂದಿಗೆ ಜನಸಾಮಾನ್ಯರ ಜೊತೆ ಬದುಕಿದ ಅನುಭವಗಳು ಅವರನ್ನು ಸಹಜವಾಗಿ ಮುತ್ಸದ್ಧಿ ಪರಿವರ್ತಿಸಿತು. ಅವರು ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಚಿಂತಿಸಿ ಸಾಮಾಜಿಕ ಬದುಕುಗಳ ಸ್ಥೂಲ ಪರಿಚಯದಿಂದ ಅನೇಕ ಬದಲಾವಣೆ ತಂದರು  ಎಂದು ಹೇಳಿದರು.

ಅರಸರು ಮುಖ್ಯಮಂತ್ರಿಯಾದ ಸಂದರ್ಭ ಶೋಷಣೆಗೆ ಒಳಗಾದ ಜನರ ಬದುಕನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬದಲಾವಣೆ ತರುವಂಥ ಐತಿಹಾಸಿಕ ನಿರ್ಧಾರಗಳನ್ನು ಮಾಡಿದರು. ಉಳುವವನೆ ಹೊಲದೊಡೆಯ, ಮಲಹೊರುವ ಹೊರುವ ಪದ್ದತಿ ನಿರ್ಮೂಲನೆ, ಇಪ್ಪತ್ತು ಅಂಶಗಳ ಕಾರ್ಯಕ್ರಮ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ನಿಗಮವನ್ನು ಸ್ಥಾಪಿಸಿಸುವ ಮ‌ೂಲಕ ಬಡವರ ಬದುಕನ್ನು ರೂಪಿಸಿದರು ಎಂದರು.

ದೇವರಾಜ ಅರಸರ ಆಡಳಿತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ನಮ್ಮ ಸರ್ಕಾರದ ಆಡಳಿತ ಒಂದೇ ರೀತಿಯಲ್ಲಿದೆ. ಅವರ ದಾರಿಯಲ್ಲೇ ನಾವು ಸಾಗುತ್ತಿದ್ದೇವೆ. ನಮ್ಮ ಯುವಕರು ಜಾತ್ಯಾತೀತ, ಪ್ರಜಾಪ್ರಭುತ್ವ, ಸಂವಿಧಾನ ಬದ್ದ ನಡವಳಿಕೆ ಮೂಲಕ ಸ್ವಾತಂತ್ರ್ಯ ಉದ್ದೇಶ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.

ಮಹಾಪೌರರಾದ ಶಿವಕುಮಾರ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮರಿತಿಬ್ಬೇಗೌಡ, ಉಪಮಹಾಪೌರರಾದ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!