ಮೊಬೈಲ್‌ ಕಳುವಾದ್ರೆ ಚಿಂತೆ ಬೇಕಿಲ್ಲ: ಪತ್ತೆಹಚ್ಚಲು ಸರ್ಕಾರದಿಂದ ಹೊಸ ಟ್ರ್ಯಾಕಿಂಗ್ ವ್ಯವಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯಾವ ವಸ್ತು ಕಳೆದು ಹೋದ್ರೂ ಹೆಚ್ಚು ಬೇಜಾರಾಗಲ್ಲ, ಆದರೆ ಮೊಬೈಲ್‌ ಕಳೆದು ಹೋದ್ರೆ ಮಾತ್ರ ತುಂಬಾನೆ ಬೇಸರ ಆಗತ್ತೆ ಅಲ್ವಾ. ಆದ್ರೆ ಇನ್ಮುಂದೆ ಮೊಬೈಲ್ ಕಳೆದು ಹೋದ್ರೆ ಚಿಂತೆ ಮಾಡೋದು ಬೇಕಿಲ್ಲ, ಏಕೆಂದರೆ ಕಳೆದು ಹೋದ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಹಾಗೂ ಇತರರು ಆ ಫೋನ್‌ ಬಳಸುವುದನ್ನು ನಿರ್ಬಂಧಿಸಲು ಸರ್ಕಾರ ಶೀಘ್ರವೇ ಹೊಸ ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಜಾರಿಗೆ ತರಲಿದೆ.

ಟೆಲಿಮ್ಯಾಟಿಕ್ಸ್ ಇಲಾಖೆ (CDoT) ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯು ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಈಶಾನ್ಯ ಪ್ರದೇಶಗಳು ಸೇರಿದಂತೆ ಕೆಲವು ಟೆಲಿಕಾಂ ವಲಯಗಳಲ್ಲಿ ಸಿಇಐಆರ್ ಸಿಸ್ಟಮ್‌ನ (CEIR System) ಪ್ರಯೋಗವನ್ನು ನಡೆಸುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯವಸ್ಥೆ ಈಗ ಪ್ಯಾನ್ ಇಂಡಿಯಾ ನಿಯೋಜನೆಗೆ ಸಿದ್ಧವಾಗಿದೆ ಎಂದು ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿಯ ಪ್ರಕಾರ ಟೆಲಿಮ್ಯಾಟ್ರಿಕ್ಸ್ ಅಭಿವೃದ್ಧಿ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್‌ಕುಮಾರ್ ಉಪಾಧ್ಯಾಯ ಅವರು ತಂತ್ರಜ್ಞಾನವು ಪ್ಯಾನ್ ಇಂಡಿಯಾ ನಿಯೋಜನೆಗೆ ಸಿದ್ಧವಾಗಿದೆ ಎಂದು ದೃಢಪಡಿಸಿದ್ದಾರೆ. ಆದರೆ ಖಚಿತ ದಿನಾಂಕವನ್ನು ಅಧಿಕಾರಿಗಳು ತಿಳಿಸಿಲ್ಲವಾದರೂ ಸಿಇಐಆರ್ ಸಿಸ್ಟಮ್ ಮೇ 17ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಮೊಬೈಲ್‌ಗಳನ್ನು ಮಾರಾಟ ಮಾಡುವುದಕ್ಕೂ ಮೊದಲು ಸಾಧನಗಳ ಅಂತಾರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತನ್ನು (IMEI) ಬಹಿರಂಗಪಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಐಎಂಇಐ 15 ಅಂಕಿಯ ಗುರುತಾಗಿದ್ದು, ಪ್ರತಿ ಮೊಬೈಲ್ ಫೋನ್‌ನಲ್ಲೂ ಭಿನ್ನ ಸಂಖ್ಯೆಯದ್ದಾಗಿರುತ್ತದೆ. ಟೆಲಿಕಾಂ ಆಪರೇಟರ್‌ಗಳು ಹಾಗೂ ಸಿಇಐಆರ್ ಸಿಸ್ಟಮ್ ಅನ್ನು ಸಾಧನದ ಐಎಂಇಐ ಸಂಖ್ಯೆಗೆ ಲಿಂಕ್ ಮಾಡಿದ ಬಳಿಕ ಕಳೆದು ಹೋದ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಸಹಕಾರಿಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!