ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ನಾನು ಸರಕಾರವಲ್ಲ. ನಾವು ಮೇಧಾ ಪಾಟ್ಕರ್ ಅವರ ಭಾವನೆ ಗೌರವಿಸುತ್ತೇವೆ. ನನ್ನದೂ ಸೇರಿದಂತೆ ನಮ್ಮ ಕ್ಷೇತ್ರದ ಜನರ ಆಸ್ತಿಗಳು ಯೋಜನೆಗೆ ಹೋಗುತ್ತಿದ್ದು, ವಿರೋಧ ಮಾಡುವುದಾದರೆ ನಾವು ಮಾಡಬೇಕು. ಅವರು ಹಿರಿಯ ಮಹಿಳೆ, ಅವರಿಗೆ ಉತ್ತರ ನೀಡಲು ಬೊಮ್ಮಾಯಿ ಅವರು ಸೂಕ್ತ ವ್ಯಕ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಮೇಕೆದಾಟು ಪಾದಯಾತ್ರೆಯ ರೂವಾರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಯೋಜನೆಗೆ ಮೇಧಾ ಪಾಟ್ಕರ್ ಹಾಗೂ ಇತರರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಉತ್ತರಿಸಿ, ಆ ಹೆಣ್ಣು ಮಗಳ ಬಗ್ಗೆ ನಮಗೆ ಗೌರವವಿದೆ. ಅವರು ತಮ್ಮದೇ ಆದ ಚಿಂತನೆಗಳ ಮೇಲೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ನಮ್ಮ ಹೋರಾಟ ವ್ಯಕ್ತಿಗತ ಚಿಂತನೆಯಲ್ಲ, ಜನರ ಚಿಂತನೆ. ನಮ್ಮದು ಜನರ ಬಯಕೆ, ಬದುಕಿನ ಹೋರಾಟ. ನೀರು ನಮಗೆ ಜೀವ, ಜೀವ ಇದ್ದರಷ್ಟೇ ಜೀವನ. ಅವರ ಅಭಿಪ್ರಾಯ ಅವರದ್ದು. ಸರಕಾರ ಇಂತಹ ಯೋಜನೆಗೆ ಪರಿಸರ ಇಲಾಖೆ ಅನುಮತಿಯಂತಹ ಕಾನೂನು ಮಾಡಿರುವುದು ಇವರಿಗಾಗಿಯೇ ಎಂದರು.
ಮೇಕೆದಾಟು ಯೋಜನೆಯಿಂದ ನಮ್ಮ ತಾಲೂಕಿಗೆ ಬಹಳ ನಷ್ಟ ಉಂಟಾಗಲಿದೆ. ಬೆಂಗಳೂರಿಗೆ ನೀರು ತರಬೇಕಾದರೆ ನಮ್ಮ ಜಮೀನು ಹೋಗುತ್ತವೆ. ರೈತರ ಜಮೀನಿಗೆ ಉತ್ತಮ ಬೆಲೆ ನೀಡುವಂತೆ ಹೋರಾಟ ಮಾಡುತ್ತೇವೆ. ಮಳವಳ್ಳಿ ಮೂಲಕವಾಗಿ ಬೆಂಗಳೂರಿಗೆ ನೀರು ತಂದಿದ್ದಾರಲ್ಲಾ ಅಲ್ಲೆಲ್ಲಾ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದಾರೆ ಗೊತ್ತಾ? ಎಕರೆಗೆ ಕೇವಲ ₹ 30 ಸಾವಿರ, ₹ 50 ಸಾವಿರ, ₹ 1 ಲಕ್ಷದಂತೆ ಪರಿಹಾರ ಕೊಟ್ಟಿದ್ದಾರೆ. ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ಹೇಳಿಕೊಳ್ಳಲಿ. ಅವರಿಗೆ ಉತ್ತರ ಕೊಡಲು ಸರಕಾರ ಇದೆ, ನಾವ್ಯಾಕೆ ಉತ್ತರಿಸೋಣ? ಎಂದರು.
ಕೆಲವರು ಒಂದು ಎಕರೆ ಮುಳುಗಡೆಯಾದರೆ ಎರಡು ಎಕರೆ ನೀಡಬೇಕು ಎಂದು ಹೇಳುತ್ತಾರೆ. ರಸ್ತೆ ಅಗಲ ಮಾಡಿದರೆ ಆಸ್ತಿ ಹೋಗುತ್ತದೆ ಎಂದು ಸುಮ್ಮನಿದ್ದರೆ ರಸ್ತೆ ಆಗುವುದಿಲ್ಲ. ರಾಜೀವ್ ಗಾಂಧಿ ಅವರು ಯೋಜನೆಗಳಿಗೆ ಆಸ್ತಿ ಸ್ವಾಧೀನ ಕಾನೂನು ತಂದು ಜನರಿಗೆ ಉತ್ತಮ ಪರಿಹಾರ ಸಿಗುವಂತೆ ಮಾಡಿದರು. ಕೆಲವರು ಸರಕಾರಿ ಅಧಿಕಾರಿಗಳನ್ನು ಜೊತೆ ಮಾಡಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ಹಣ ಪರಿಹಾರಕ್ಕೆ ಆಗ್ರಹಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಯೋಜನೆ ಎಲ್ಲರಿಗೂ ಅನುಕೂಲವಾಗಲಿದ್ದು, ನಮ್ಮ ಸರಕಾರ ಇದ್ದಾಗ ಕಾವೇರಿ ನ್ಯಾಯಾಧಿಕರಣ ತೀರ್ಪು ಹೊರ ಬಂದಿತ್ತು. ಹೀಗಾಗಿ ಈ ಯೋಜನೆಗೆ ಜೀವ ಬಂದಿತು. ತೀರ್ಪು ಬಂದ ನಂತರ ಡಿಪಿಆರ್ ಮಾಡಿದ್ದೆವು. ನಮ್ಮ ಸರಕಾರ ಇನ್ನೂ ಕೆಲ ತಿಂಗಳುಗಳ ಕಾಲ ಇದಿದ್ದರೆ ಈ ಯೋಜನೆ ಒಂದು ಹಂತಕ್ಕೆ ಬರುತ್ತಿತ್ತು. ಬಿಜೆಪಿ ಸರಕಾರ ಈ ಯೋಜನೆ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಭಾವಿಸಿದ್ದೆ. ಅಲ್ಲಿದ್ದ ಮಂತ್ರಿಗಳು, ಇಲ್ಲಿದ್ದ ಮುಖ್ಯಮಂತ್ರಿಗಳು ಅವರವರ ಕೆಲಸದಲ್ಲೇ ಮುಳುಗಿದ್ದರು. ಹೊಸ ಮುಖ್ಯಮಂತ್ರಿ ಬಂದಿದ್ದಾರೆ, ಅವರಿಗೆ ನೀರಾವರಿ ಇಲಾಖೆ ನಿರ್ವಹಿಸಿ, ಅದರ ವ್ಯವಸ್ಥೆ ಗೊತ್ತಿದೆ. ನಾವು ಸ್ವಲ್ಪ ದಿನ ಕಾದು ನಂತರ ಹೋರಾಟ ಆರಂಭಿಸಿದ್ದೇವೆ ಎಂದು ಹೇಳಿದರು.