ಚಿತ್ರದುರ್ಗದಲ್ಲಿ ಎರಡನೇ ವಾರಾಂತ್ಯದ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

ಹೊಸದಿಗಂತ ವರದಿ, ಚಿತ್ರದುರ್ಗ:

ಕೋವಿಡ್-೧೯ರ ಮೂರನೇ ಅಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯಂತೆ ಜ.೧೯ ರವರೆಗೆ ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ಸೇರಿದಂತೆ ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ವಾರದ ಕೊನೆಯ ಎರಡು ದಿನ ಕರ್ಫ್ಯೂ ಜಾರಿ ಮಾಡಿದ್ದು, ಶುಕ್ರವಾರ ರಾತ್ರಿ ೮ ರಿಂದ ಸೋಮವಾರ ಮುಂಜಾನೆ ೫ ಗಂಟೆವರೆಗೆ ಜಾರಿಯಲ್ಲಿರಲಿದೆ. ಕಳೆದ ವಾರದಿಂದ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದ್ದು, ಇದೀಗ ಎರಡನೇ ವಾರದ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಅವಧಿಯಲ್ಲಿ ತುರ್ತು ಮತ್ತು ಅಗತ್ಯ ಚಟುವಟಕೆಗಳನ್ನು ಹೊರತುಪಡಿಸಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳುವವರು, ತುರ್ತು ಸಂದರ್ಭದಲ್ಲಿ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ಅಡ್ಡಿ ಇಲ್ಲ. ಆಹಾರ, ದಿನಸಿ ಹಣ್ಣು-ತರಕಾರಿ, ಹಾಲಿನ ಬೂತ್ ಮತ್ತು ಪ್ರಾಣಿಗಳ ಆಹಾರಗಳ ಮಾರಾಟ ಮಳಿಗೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬೀದಿ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸಿದರು. ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಿಂದ ಆಹಾರ ಪಾರ್ಸಲ್ ಮಾತ್ರ ಅವಕಾಶ ನೀಡಲಾಗಿತ್ತು.
ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ಆಟೋಗಳು ಮಾಮೂಲಿನಂತೆ ಸಂಚರಿಸುತ್ತಿದ್ದವು. ಆದರೆ ಪ್ರಯಾಣಿಕರ ಸಂಖ್ಯೆ ಮಾತ್ರ ಗಣನೀಯವಾಗಿ ಕಡಿಮೆಯಾಗಿತ್ತು. ಆದ್ದರಿಂದ ಪ್ರತಿದಿನ ಸಂಚರಿಸುತ್ತಿದ್ದ ಸರ್ಕಾರಿ ಬಸ್‌ಗಳ ಸಂಖ್ಯೆ ಕಡಿಮೆ ಮಾಡಲಾಗಿತ್ತು. ಸಂಚರಿಸುತ್ತಿದ್ದ ಕೆಲವು ಬಸ್‌ಗಳಿಗೆ ಅಗತ್ಯಕ್ಕೆ ತಕ್ಕಷ್ಟು ಪ್ರಯಾಣಿರು ಭರ್ತಿಯಾದ ಮೇಲೆ ಬಸ್‌ಗಳು ಸಂಚರಿಸುತ್ತಿದ್ದವು. ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಬಿಸಿಮುಟ್ಟಿಸುತ್ತಿದ್ದರು.
ನಗರದ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಗತ್ಯ ವಸ್ತುಗಳ ಹೊರತುಪಡಿಸಿ ಇತರೆ ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಜನಸಂದಣಿ ಕಡಿಮೆ ಇತ್ತು. ನಗರದ ಸಂತೆಹೊಂಡ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿಯ ತರಕಾರಿ ಮಾರುಕಟ್ಟೆಗಳಲ್ಲೂ ಕೆಲವು ವ್ಯಾಪಾರಿಗಳು ಮಾತ್ರ ವಹಿವಾಟು ನಡೆಸುತ್ತಿದ್ದರು. ಖಾಸಗಿ ಬಸ್‌ನಿಲ್ದಾಣದಲ್ಲಿ ಬಹುತೇಕ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಬಸ್‌ಗಳಲ್ಲಿ ಹಾಗೂ ರಸ್ತೆಗಳಲ್ಲಿ ಅಷ್ಟಾಗಿ ಜನ ಸಂದಣಿ ಕಂಡುಬರಲಿಲ್ಲ.
ಸಂಕ್ರಾಂತಿ ಹಬ್ಬದ ಕಾರಣ ಸರ್ಕಾರಿ ಕಚೇರಿಗಳು ಬಂದ್ ಆಗಿದ್ದವು. ಹಾಗಾಗಿ ಸಾರ್ವಜನಿಕರ ಸಂಚಾರ ಕಂಡುಬರಲಿಲ್ಲ. ದಿನಪೂರ್ತಿ ಜನರಿಂದ ತುಂಬಿ ಗಿಜಿಗುಡುತ್ತಿದ್ದ ಒನಕೆ ಓಬವ್ವ ವೃತ್ತ ಶನಿವಾರ ಜನರಿಲ್ಲದೆ ಬಣಗುಡುತ್ತಿತ್ತು. ಹಬ್ಬ ಆಚರಣೆಯಲ್ಲಿ ತೊಡಗಿದ್ದ ಜನರು ಬಹುತೇಕ ಮೆಯಿಂದ ಹೊರಗೆ ಬರಲಿಲ್ಲ. ವಾರಾಂತ್ಯದ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!