Saturday, September 23, 2023

Latest Posts

ಸರಕಾರ ಸುತ್ತೋಲೆ ಹಿಂಪಡೆಯಬಾರದು: ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟ ಒತ್ತಾಯ

ಹೊಸದಿಗಂತ ವರದಿ,ಮಡಿಕೇರಿ:

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಗ್ರಾ.ಪಂ.ಗಳ ಪಾತ್ರ ಕರಿತಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಹೋರಾಟವನ್ನು ಗ್ರಾ.ಪಂ ಸದಸ್ಯರ ಮಹಾಒಕ್ಕೂಟ ವಿರೋಧಿಸುತ್ತದೆ ಮತ್ತು ಸರ್ಕಾರ ಯಾವುದೇ ಕಾರಣಕ್ಕೂ ಸುತ್ತೋಲೆಯನ್ನು ಹಿಂಪಡೆಯಬಾರದು ಎಂದು ಮಹಾ ಒಕ್ಕೂಟದ ಕೊಡಗು ಜಿಲ್ಲಾ ಸಂಚಾಲಕ ಜಾನ್ಸನ್ ಪಿಂಟೋ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂಗನವಾಡಿಗಳು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿಗಳಿಂದ ಕೂಡಿದ ಗ್ರಾಮ ಪಂಚಾಯಿತಿಗಳ ಮೇಲುಸ್ತುವಾರಿಯಲ್ಲಿಯೇ ನಡೆಸಬೇಕು. ಆದ್ದರಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಗ್ರಾ.ಪಂ ಪಾತ್ರ ಕುರಿತಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಿರೋಧಿಸುವುದು ಮತ್ತು ವಾಪಸ್ಸು ಪಡೆಯುವಂತೆ ಹೋರಾಟ ಮಾಡುವುದು ಸಂವಿಧಾನ ವಿರೋಧಿ ನಿಲುವು ಎಂದು ಟೀಕಿಸಿದ್ದಾರೆ.
ಗ್ರಾಮ ಪಂಚಾಯಿತಿಗಳು ಸಂವಿಧಾನದ ಅನುಚ್ಛೇದ 243ಜಿ ಅಡಿಯಲ್ಲಿ ಸ್ಥಾಪಿತವಾದ ಸ್ಥಳೀಯ ಸ್ವಯಂ ಸರ್ಕಾರಗಳಾಗಿದ್ದು, ಸಂವಿಧಾನದ ಅನುಸೂಚಿ 11ರ ಅನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಪ್ರಕರಣ 58(4) ಮತ್ತು (5)ರ ಅನ್ವಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಷಯವು ಪಂಚಾಯತ್ ರಾಜ್ ಸಂಸ್ಥೆಗಳ ಹೊಣೆಗಾರಿಕೆಯೂ ಆಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಮಕ್ಕಳ ರಕ್ಷಣಾ ಆಯೋಗ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕುರಿತಾದ ತನ್ನ ವರದಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಯೋಜನೆಯ ಅನುಷ್ಠಾನದ ಜವಾಬ್ದಾರಿ ನೀಡಬೇಕೆಂದು ಒತ್ತಾಯಿಸಿರುವುದನ್ನು ಹಾಗೂ ಭಾರತದ ಸರ್ವೋಚ್ಛ ನ್ಯಾಯಾಲಯವೂ “ಆಹಾರ ಹಕ್ಕು ಕಾಯ್ದೆಯ ವಿಷಯಕ್ಕೆ ಸಂಬಂಧಿಸಿದ ದಾವೆಯೊಂದರ ತೀರ್ಪಿನಲ್ಲಿ (28 ನವೆಂಬರ್ 2001) ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಗುಣಮಟ್ಟದಲ್ಲಿ ಅನುಷ್ಠಾನಗೊಳಿಸುವುದನ್ನು ಖಾತ್ರಿಗೊಳಿಸಲು ಅಂಗನವಾಡಿಗಳನ್ನು ಗ್ರಾ.ಪಂ.ಗಳ ವ್ಯಾಪ್ತಿಗೆ ತರಬೇಕೆಂದು ಹೇಳಿರುವುದನ್ನು ಅಂಗನವಾಡಿ ನೌಕರರ ಸಂಘಗಳು ಗಮನಿಸಬೇಕೆಂದು ಮನವಿ ಮಾಡಿದ್ದಾರೆ.
ಪಾಳೇಗಾರಿಕೆ, ಭೂಮಾಲಕ ವರ್ಗಕ್ಕೆ ಸೇರಿದವರು ಅಥವಾ ಅವರ ಹಿಡಿತದಲ್ಲಿರುವವರೇ ಇಂದು ಜನಪ್ರತಿನಿಧಿಗಳ ಸ್ಥಾನದಲ್ಲಿರುವುದರಿಂದ ಸರಕಾರದ ಹೊಸ ಆದೇಶ ಅಂಗನವಾಡಿ ಕೇಂದ್ರಗಳ ಮೇಲೆ ಮತ್ತು ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆರೋಪಿಸಿರುವ ಅಂಗನವಾಡಿ ನೌಕರರ ಸಂಘಟನೆಗಳು ಸುತ್ತೋಲೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತಿವೆ. ಪಂಚಾಯತ್ ರಾಜ್ ವ್ಯವಸ್ಥೆ ದೇಶದ ಎಲ್ಲಾ ಸಾಮಾಜಿಕ ವರ್ಗ, ಜಾತಿ, ಧರ್ಮಗಳ ಹಾಗೂ ಸ್ಥರಗಳ ಜನರಿಗೆ ಮತ್ತು ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡಿದೆ. ಅಂಗನವಾಡಿ ನೌಕರರ ಸಂಘವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಗ್ರಾ.ಪಂ ಸದಸ್ಯರನ್ನು “ಪಾಳೇಗಾರಿಕೆ, ಭೂಮಾಲಕ ವರ್ಗಕ್ಕೆ ಸೇರಿದವರು ಅಥವಾ ಅವರ ಹಿಡಿತದಲ್ಲಿರುವವವರು” ಎಂದು ಟೀಕಿಸುವ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ ರಾಜ್ಯದ ಜನರನ್ನು ಅವಮಾನಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜಾನ್ಸನ್ ಪಿಂಟೋ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಅಂಗನವಾಡಿ ನೌಕರರ ಸಂಘದ ಒತ್ತಡಕ್ಕೆ ಸರಕಾರ ಮಣಿಯಬಾರದೆಂದೂ ಅವರು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!