ಇಂಜನೀಯರ್ ಪದವಿಗಿಂತ ಕೃಷಿ ಪದವಿ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ: ಕೃಷಿ ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ,ಹಾವೇರಿ:

ವೈದ್ಯಕೀಯ ಹಾಗೂ ಇಂಜನೀಯರಿಂಗ್ ಪದವಿ ಕೋರ್ಸ್‌ಗಳಿಗಿಂತ ಪ್ರಸ್ತುತ ದಿನಗಳಲ್ಲಿ ಕೃಷಿ ಪದವಿ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕೃಷಿ ವಿವಿಗಳು ರೈತರಿಗೆ ಹೊಸ ತಂತ್ರಜ್ಞಾನ, ಆಧುನಿಕ ಕೃಷಿ ಪದ್ಧತಿ ಪರಿಚಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಸೋಮವಾರ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಐದು ಕೋಟಿ ರೂ ವೆಚ್ಚದ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ೨೬ ಸಾವಿರ ಇಂಜನೀಯರ್ ಸೀಟಗಳಿಗೆ ಪ್ರವೇಶವಿಲ್ಲದೆ ಖಾಲಿ ಉಳಿದಿವೆ. ಆದರೆ ಒಂದೇ ಒಂದು ಕೃಷಿ ಪದವಿ ಸೀಟುಗಳು ಖಾಲಿ ಉಳಿದಿರುವುದಿಲ್ಲ. ಕೃಷಿ ಕ್ಷೇತ್ರ ಹಾಗೂ ಕೃಷಿ ಪದವಿಯ ಬಗ್ಗೆ ಹೆಚ್ಚಿನ ಒಲವು ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ ಎಂದರು.
ರೈತರ ಮಕ್ಕಳಿಗೆ ಶೈಕ್ಷಣಿಕ ಕಲಿಕೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಕೃಷಿ ಶಿಕ್ಷಣದ ಸೀಟುಗಳಲ್ಲಿ ಶೇ.೪೦ ರಿಂದ ಶೇ.೫೦ರಷ್ಟು ಮೀಸಲಾತಿಯನ್ನು ಹೆಚ್ಚಳ ಮಾಡಲಾಗಿದೆ. ರೈತರ ಮಕ್ಕಳ ವ್ಯಾಸಂಗಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ ೩ ಸಾವಿರದಿಂದ ೧೨ ಸಾವಿರವರೆಗೆ ಸ್ಕಾಲರ್‌ಶಿಪ್‌ಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಕೃಷಿ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯ ೧೪ ಜಿಲ್ಲೆಗಳಲ್ಲಿ ಸಂಚಾರಿ ಮಾಡಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ನಡೆಸಿ, ಆಯಾ ಪ್ರದೇಶದ ಹವಾಮಾನ, ರೈತರ ಬೆಳೆ ಪದ್ಧತಿ ಅರಿತುಕೊಂಡಿದ್ದೇನೆ. ಕರ್ನಾಟಕ ರಾಜ್ಯಕ್ಕೆ ಇಸ್ರೇಲ್ ಕೃಷಿ ಪದ್ಧತಿಗಿಂತ ಕೋಲಾರ ಮಾದರಿಯ ಬಹು ಬೆಳೆಯ ಕೃಷಿ ಮಾದರಿ ಅತ್ಯಂತ ಅನುಕರಣೀಯ. ಈ ಮಾದರಿಯ ಕೃಷಿಯನ್ನು ನಮ್ಮ ರೈತರು ಅಳವಡಿಸಿಕೊಂಡರೆ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಕೇಂದ್ರದಿಂದ ನ್ಯೂ ವಾಟರ್ ಜನರೇಷನ್ ಯೋಜನೆಯಡಿ ರಾಜ್ಯಕ್ಕೆ ಐದು ವರ್ಷಗಳ ಅವಧಿಗೆ ೬೦೦ ಕೋಟಿರೂ. ಅನುದಾನ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ಜಿಲ್ಲೆಯ ಏಳು ತಾಲೂಕುಗಳಿಗೆ ೧೨ ಕೋಟಿರೂ. ರಿಂದ ೧೫ ಕೋಟಿ ಅನುದಾನ ಒದಗಿಸಿ ಚೆಕ್ ಡ್ಯಾಂ, ವಡ್ಡು ನಿರ್ಮಾಣ ಹಾಗೂ ಭೂಮಿಯಲ್ಲಿ ನೀರು ಇಂಗಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿ ಕುಲಪತಿ ಡಾ.ಎಂ.ಬಿ.ಚಟ್ಟಿ, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಗುತ್ತೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ತಹಶೀಲ್ದಾರ ಶಂಕರ್, ಕಜ್ಜರಿ ಗ್ರಾ.ಪಂ ಅಧ್ಯಕ್ಷ ಸುರೇಶ ಮೊಟೇಬೆನ್ನೂರ, ಉಪಾಧ್ಯಕ್ಷೆ ಗೌರವ್ವ ಲಮಾಣಿ, ಕೃಷಿ ವಿವಿ ಡೀನ್ ಡಾ.ಬಸವರಾಜಪ್ಪ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!