ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕೇಂದ್ರ ಸರ್ಕಾರ ಹೊಸ ಆದಾಯ ತೆರಿಗೆ ಕಾಯ್ದೆ-2025 ಜಾರಿಗೆಗೊಳಿಸುವ ಮೂಲಕ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರ ಮಹತ್ವದ ಪ್ರಯತ್ನ ಮಾಡಿದೆ. ಸದ್ಯ ಆರ್ಥಿಕ ವ್ಯವಸ್ಥೆ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಭಾರತ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಶುಕ್ರವಾರ ಇಲ್ಲಿಯ ಕೇಶ್ವಾಪುರದ ಲೆಕ್ಕಪರಿಶೋಧಕರ ಸಂಸ್ಥೆ ವತಿಯಿಂದ ಐಸಿಎಐ ಭವನದಲ್ಲಿ ಏರ್ಪಡಿಸಿದ್ದ ಹೊಸ ಆದಾಯ ತೆರಿಗೆ ಕಾಯ್ದೆ -2025 ಕುರಿತು ಎರಡು ದಿನದ ಸೆಮಿನಾರ್‌ಗೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರ ಆಡಳಿತ ಕ್ರಮವು ವಿಶ್ವಾಸ ಆಧಾರಿತ ಆಡಳಿತಕ್ಕೆ ಆದ್ಯತೆ ನೀಡುತ್ತಿದೆ. ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆದಾರರ ಮೇಲಿನ ಅನುಸರಣೆ ಭಾರವನ್ನು ಕಡಿಮೆ ಮಾಡುವುದು, ನ್ಯಾಯಾಂಗ ವ್ಯಾಜ್ಯಗಳನ್ನು ತಗ್ಗಿಸುವುದು ಹಾಗೂ ವಿವಿಧ ತೊಡಕಾಗಿರುವ ಕಾನೂನು ಸರಳಗೊಳಿಸುವುದಕ್ಕೆ ಗಮನ ಹರಿಸಿದೆ ಎಂದರು.
ಅನಾವಶ್ಯಕ ನಿಯಮಗಳಿಗೆ ಗೇಟ್ ಪಾಸ್
ಉದ್ಯಮ ಸುಲಭತೆಗೆ ವೇದಿಕೆ ಕಲ್ಪಿಸುವುದು ಸರ್ಕಾರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಅನಾವಶ್ಯಕ ನಿಯಮಗಳನ್ನು ತೆಗೆದು ಹಾಕಿದೆ. ವಿವಿಧ ಕಾನೂನುಗಳ ಅಡಿಯಲ್ಲಿ ಅನೇಕ ತಪ್ಪುಗಳನ್ನು ಈ ಸುಧಾರಿತ ನಿಯಮಗಳಿಂದ ಹೊರಗಿಟ್ಟಿದೆ ಎಂದು ತಿಳಿಸಿದರು.
ತೆರಿಗೆ ಕಾನೂನು ತಿದ್ದುಪಡಿ
ತೆರಿಗೆ ಸುಧಾರಣೆಗಳನ್ನು ಉಲ್ಲೇಖಿಸಿದ ಅವರು, ಹಳೆಯ ಆದಾಯ ತೆರಿಗೆ ಕಾಯ್ದೆ 1961 ರಲ್ಲಿ ಜಾರಿಗೆ ಬಂದಿದ್ದು, 65 ವರ್ಷಗಳಲ್ಲಿ ಸುಮಾರು 4 ಸಾವಿರ ತಿದ್ದುಪಡಿಗಳು ಹಾಗೂ 19 ತೆರಿಗೆ ಕಾನೂನು ತಿದ್ದುಪಡಿಯಾಗಿವೆ ಎಂದು ತಿಳಿಸಿದರು.
ಜನಪರ ಆಡಳಿತ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಕಳೆದ 12 ವರ್ಷಗಳಲ್ಲಿ ತಂತ್ರಜ್ಞಾನ ಆಧಾರಿತ ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಿ ದೇಶಾದ್ಯಂತ ವೇಗವಾಗಿ ಜಾರಿಗೊಳಿಸಲಾಗಿದೆ. ಹೊಸ ಆದಾಯ ತೆರಿಗೆ ಕಾಯ್ದೆ 2025 ರ ಅಡಿಯಲ್ಲಿ ಸೆಕ್ಷನ್‌ಗಳ ಸಂಖ್ಯೆಯನ್ನು 536ಕ್ಕೆ ಇಳಿಸಲಾಗಿದ್ದು, ಇದರಿಂದ ಕಾನೂನು ಬಹಳ ಸರಳಗೊಂಡಿದೆ ಎಂದರು.
ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್, ಆದಾಯ ತೆರಿಗೆ ತಜ್ಞರು, ಲೆಕ್ಕಪತ್ರ ವೃತ್ತಿಪರರು, ವಿವಿಧ ವೃತ್ತಿಪರ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಸಿರಸಿ ಮತ್ತು ಶಾಖೆಯ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರತಿನಿಽಗಳು ಭಾಗವಹಿಸಿದರು. ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ರಿಷಭ್ ಉಪಾಧ್ಯಾಯ, ಕಾರ್ಯದರ್ಶಿ ಅನಂತ್ ನ್ಯಾಮಣ್ಣವರ, ವಿರೂಪಾಕ್ಷ ಹಿಪ್ಪರಗಿ, ಆದರ್ಶ ಹಿರೇಮಠ, ಸಂತೋಷ್ ಕುಮಾರ್ ಪಾಟೀಲ್ ಇದ್ದರು.



