ದಿಗಂತ ವರದಿ ವಿಜಯಪುರ:
ರಾಜ್ಯ ಸರ್ಕಾರ ರೈತರ ಬೆಳೆ ಹಾನಿ ಅಂದಾಜಿಸುವಲ್ಲಿ ವಿಫಲವಾಗಿದೆ ಎಂದು ರೈತ ಹೋರಾಟಗಾರ ಕುರುಬೂರ ಶಾಂತಕುಮಾರ್ ದೂರಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆಯಿಂದಾಗಿ ರೈತರ ಬೆಳೆಗಳು ಹಾಳಾಗಿವೆ. ಆದರೆ, ಸರ್ಕಾರ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದೆ ಎಂದರು.
ಇನ್ನು ಭಿಕ್ಷಾ ರೂಪದ ಪರಿಹಾರ ರೈತರಿಗೆ ಬೇಡ. ನೈಜ ವರದಿಯ ಪ್ರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಬೆಂಗಳೂರು ವಿಧಾನಸೌಧ ಚಲೋ ಸೆ. 26 ರಂದು ಹಮ್ಮಿಕೊಳ್ಳಲಾಗಿದೆ. ವಿದ್ಯುತ್ ಖಾಸಗೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬೆಂಗಳೂರು ಚಲೋ ನಡೆಯಲಿದೆ ಎಂದರು.
ಶಾಸಕರು, ಸಚಿವರು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದಾರೆ, ಹೀಗಾಗಿ ರೈತರ ಕಬ್ಬಿನ ಬೆಳೆಗಳಿಗೆ ನೈಜ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಪರಿಹಾರ ನೀಡುವ ಭರವಸೆ ನೀಡಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದರು.
ಶಾಸಕರು, ಸಚಿವರಿಗೆ ಮಾನ ಮಾರ್ಯಾದೆ ಇಲ್ಲ. ಕೇವಲ ಪ್ರಚಾರಕ್ಕಾಗಿ ಡ್ಯಾನ್ಸ್, ಮೋಜು ಮಸ್ತಿ ಮಾಡುತ್ತಿದ್ದು ಖಂಡನೀಯ. ದೇಶದ ಜನತೆಗೆ ಅಮೃತ ಮಹೋತ್ಸವ ಇಲ್ಲ. ಸ್ವಾತಂತ್ರ್ಯವೂ ಇಲ್ಲ. ರೈತರಿಗೆ ಸ್ವತಂತ್ರ ಇಲ್ಲದಂತಾಗಿದೆ ಎಂದರು.