Monday, October 3, 2022

Latest Posts

ಸರಕಾರ ಅತಿವೃಷ್ಟಿ ಬೆಳೆ ನಾಶದ ಸಮೀಕ್ಷೆ ನಡೆಸಿಲ್ಲ: ಸಿದ್ದರಾಮಯ್ಯ ಆರೋಪ

ಹೊಸದಿಗಂತ ವರದಿ, ಮಡಿಕೇರಿ:

ಅತಿವೃಷ್ಟಿಯಿಂದ‌ ರಾಜ್ಯದಲ್ಲಿ ಮಳೆಯಿಂದ 5.23 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಆದರೆ ಈ ಬಗ್ಗೆ ಸರ್ಕಾರ ಇನ್ನೂ ಕೂಡಾ ಸರಿಯಾದ ಸಮೀಕ್ಷೆ ನಡೆಸಿಲ್ಲ ಎಂದು‌ ವಿರೋಧ ಪಕ್ಷದ‌ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಠಿ ಹಿನ್ನೆಲೆಯಲ್ಲಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಲಾಗುತ್ತಿದ್ದು, ಈಗಾಗಲೇ ರಾಜ್ಯದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇಂದು ಕೂಡಾ ಮೈಸೂರಿನಿಂದ ಬಂದು ಕೊಡಗಿನಲ್ಲಿ ವಿವಿಧ ಭಾಗಗಳ ವೀಕ್ಷಣೆ ಮಾಡಲಾಗಿದ್ದು, ಭೂಕುಸಿತವಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.
ಕಳೆದ 2018-19ರ ಮಹಾಮಳೆಗೆ ಬಿದ್ದ ಮನೆಗಳಿಗೆ ಇನ್ನೂ ಸಂಪೂರ್ಣ ಪರಿಹಾರ ನೀಡಲಾಗಿಲ್ಲ. ಕೊಯನಾಡುವಿನಲ್ಲಿ ಮಣ್ಣು ಕುಸಿದು ಶಾಲಾ ಕಟ್ಟಡಕ್ಕೆ ಹಾನಿಯಾಗಿದ್ದು, ಮುಖ್ಯಮಂತ್ರಿಯವರು ಅದೇ ದಾರಿಯಲ್ಲಿ ಹೋದರೂ ಅಲ್ಲಿಗೆ ಭೇಟಿ ನೀಡಿಲ್ಲ ಎಂದು‌ ಆರೋಪಿಸಿದರು.
ನಮ್ಮ ಸರ್ಕಾರವಿದ್ದಾಗ ದಿಡ್ಡಳ್ಳಿ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ಆದರೆ ಈಗಿನ ಸರ್ಕಾರ ಈ ಹಿಂದೆ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದು ಟೀಕಿಸಿದರು.
ಹೆದರಿಕೆಯಿಂದ ಪ್ರತಿಭಟನೆ: ಮಡಿಕೇರಿಯಲ್ಲಿ ಜಿಲ್ಲಾಡಳಿತ ಭವನದ ತಡೆಗೋಡೆ ಕಾಮಗಾರಿ ಕಳಪೆಯಾಗಿದೆ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಶಾಸಕರೂ ಶಾಮೀಲಾಗಿರುವ ಶಂಕೆಯಿದೆ. ಆದ್ದರಿಂದಲೇ ನಾನು ಬಂದಾಗ ಪ್ರತಿಭಟನೆ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ದೂರಿದರು.
ವಿಧಾನಸಭೆಯಲ್ಲಿ ಪ್ರಸ್ತಾಪ: ಈ ಬಾರಿ ಕೊಡಗಿನ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ.ಇದಕ್ಕೆ ಹೆದರಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ.ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಬಳಿಕವೂ ಹಲವು ಬಾರಿ ಕೊಡಗಿಗೆ ಬಂದಿದ್ದೇನೆ. ಆಗ ಬಿಜೆಪಿಯವರು ಪ್ರತಿಭಟನೆ ನಡೆಸಲಿಲ್ಲ. ಈಗ ಜಿಲ್ಲಾಡಳಿತ ಭವನದ ತಡೆಗೋಡೆ ವೀಕ್ಷಣೆ ಮಾಡಬಾರದೆಂಬ ಉದ್ದೇಶದಿಂದಲೇ ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ಆರೋಪಿದರಲ್ಲದೆ, ಈ ತಡೆಗೋಡೆ ಕಾಮಗಾರಿ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!