ಹೊಸದಿಗಂತ ವರದಿ, ಹಾವೇರಿ:
ಜನರು ಸೌಲಭ್ಯಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡಿ ಚಪ್ಪಲಿ ಸವೆದು ಹೋಗುತ್ತಿತ್ತು. ಆದರೆ ಈಗ ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಜನರ ಮನೆ ಬಾಗಿಲಿಗೆ ಸರ್ಕಾರಿ ಕಚೇರಿಗಳು ಬರುವಂತಾಗಿದೆ. ಇದು ನನ್ನ ೧೩ ನೇ ಗ್ರಾಮ ವಾಸ್ತವ್ಯವಾಗಿದ್ದು, ಈವರೆಗೆ ೩,೩೮,೮೭೬ ಅರ್ಜಿಗಳ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಮಾಡುತ್ತಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹೋದ ಸಿದ್ದ ಬಂದ ಸಿದ್ದ ಅಂತ ಅಲ್ಲ. ಸ್ಥಳದಲ್ಲಿಯೇ ಜನರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಲಾಗುತ್ತಿದೆ. ನಾನು ಸಭೆ ಮಾಡಿ ಓಡಿ ಹೋಗೋಕೆ ಬಂದಿಲ್ಲ, ಇಲ್ಲೆ ಇದ್ದು ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕೊಡುವುದು ನಮ್ಮ ಉದ್ದೇಶವಾಗಿದೆ. ಉಪವಿಭಾಗಾಧಿಕಾರಿ, ತಹಶಿಲ್ದಾರ, ಮಂತ್ರಿಗಳು ದೇವತೆಗಳಿದ್ದಂತೆ ಅವರನ್ನು ಈ ಹಿಂದೆ ಯಾರು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಜನರು ಹತ್ತಾರು ಸಲ ಸರ್ಕಾರಿ ಕಚೇರಿಗಳಿಗೆ ಅಲೆದರೂ ಪರಿಹಾರ ಸಿಗುತ್ತಿರಲಿಲ್ಲ. ಅಧಿಕಾರಿಗಳಿಗೆ ಹಳ್ಳಿಗೆ ಬಂದ್ರೆ ಒಳ್ಳೆದಾಗುತ್ತದೆ ಉದ್ದೇಶದಿಂದ ಹಾಗೂ ಜನರ ಕಷ್ಟ ಏನು ಎಂಬುದನ್ನು ಅರಿತು ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯತೇಚ್ಛವಾಗಿ ಮಳೆ ಸುರಿದು ನದಿಗಳು, ಡ್ಯಾಂಗಳು ತುಂಬಿ ತುಳುಕುತ್ತಿವೆ. ನಮ್ಮ ಸರ್ಕಾರ ಮನೆ ಕಳೆದುಕೊಂಡವರಿಗೆ, ರೈತರಿಗೆ ಒಂದೇ ತಿಂಗಳಲ್ಲಿ ಪರಿಹಾರ ನೀಡುತ್ತಿದೆ. ಹಿಂದೆ ಪರಿಹಾರ ನೀಡಲು ೮ ತಿಂಗಳು ಸಮಯ ತೆಗೆದುಕೊಳ್ಳುತ್ತಿದ್ದರು. ಈ ಹಿಂದೆ ಮನೆ ಬಿದ್ದರೆ ೯೫ ಸಾವಿರ ರೂ, ಪರಿಹಾರ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಈಗ ೫ ಲಕ್ಷ ರೂ, ನೀಡುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ನಾಲ್ಕು ಸಾವಿರ ಕೋಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ರೂ.೧೪,೮೪೦ ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದರು.
ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಹಿಂದೆ ಸರಕಾರ ೩ ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ಈಗ ಪ್ರತಿ ತಿಂಗಳು ನಮ್ಮ ಸಿಎಂ ಬೊಮ್ಮಾಯಿ ಅವರು ಹತ್ತು ಸಾವಿರ ರೂ, ಕೊಡುತ್ತಿದ್ದಾರೆ. ಅವರಿಗೆ ನಿವೇಶನ ಕೊಡಲು ಸಹ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೆನೆ . ನಮ್ಮ ಸರ್ಕಾರದ್ದು ಪ್ರಚಾರ ಕಡಿಮೆ , ಕೆಲಸ ಜಾಸ್ತಿ. ವಿಲೇಜ್ ಅಕೌಂಟ್ ಬ್ರಹ್ಮ ಇದ್ದಂಗೆ, ಎಲ್ಲ ಬರೆಯೋದು ಅವನೇ, ಬ್ರಹ್ಮಲಿಪಿ ಇದನ್ನ ಬದಲಾವಣೆ ಮಾಡಿದ್ದೇನೆ ಎಂದರು.
ಕನಕದಾಸರ ಜನ್ಮಸ್ಥಳಕ್ಕೆ ಬಂದಿದ್ದೇನೆ. ಸಿಎಂ ಬೊಮ್ಮಾಯಿ ಅವರು ನಮಗೆಲ್ಲ ಸಿಎಂ, ನಿಮಗೆ ಶಾಸಕರು. ನೀವು ಪ್ರೀತಿಯಿಂದ ವೋಟ್ ಹಾಕಿ ಆಶೀರ್ವಾದ ಮಾಡಿದ್ದರಿಂದ ಇಂದು ಅವರು ಸಿಎಂ ಆಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.