ಸೈನಿಕರ ವಿಷಯದಲ್ಲಿ ರಾಜಕೀಯ ಕೂಡದು, ಇದು ನೆಹರು ಕಾಲದ ಭಾರತ ಅಲ್ಲ: ರಾಹುಲ್ ಹೇಳಿಕೆಗೆ ಬಿಜೆಪಿ ತಿರುಗೇಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಹಾಗೂ ಚೀನಾ ಸೈನಿಕರ ನಡುವಿನ ಸಂಘರ್ಷ ರಾಜಕೀಯ ಅಸ್ತ್ರವಾಗಿದ್ದು, ಅಂತಾರಾಷ್ಟ್ರಿಯ ಮಟ್ಟದಲ್ಲಿ ಚರ್ಚೆ ಜೊತೆಗೆ ದೇಶದ ಒಳಗೂ ನಾನಾ ರೀತಿಯ ಪರ ವಿರೋಧಗಳ ಮಾತುಗಳು ಕೇಳುತ್ತಿದೆ.

ಗಡಿ ಬಿಕ್ಕಟ್ಟಿನ ವಿಚಾರದ ಕುರಿತು ಮಾತನಾಡುವಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ಬಿಜೆಪಿಯ ಹಲವು ನಾಯಕರು ತಿರುಗೇಟು ನೀಡಿದ್ದಾರೆ.

‘ಅದು ಗಲ್ವಾನ್‌ ಇರಲಿ, ತವಾಂಗ್‌ ಇರಲಿ, ದೇಶದ ರಕ್ಷಣೆ ವಿಚಾರದಲ್ಲಿ ಸೈನಿಕರು ತೋರುವ ಬದ್ಧತೆ, ಶೌರ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ. ರಾಹುಲ್‌ ಗಾಂಧಿ ಅವರು ಸರ್ಕಾರವನ್ನು ಟೀಕಿಸಲಿ. ಆದರೆ, ಸೈನಿಕರ ಬಗ್ಗೆ ಸುಳ್ಳು ಮಾತನಾಡುವುದು ಸರಿಯಲ್ಲ. ಅದು ರಾಜನೀತಿ ಎನಿಸಿಕೊಳ್ಳುವುದಿಲ್ಲ. ಸೈನಿಕರ ವಿಷಯದಲ್ಲಿ ರಾಜಕೀಯ ಕೂಡದು’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕುಟುಕಿದ್ದಾರೆ.

ಇದು ನೆಹರು ಕಾಲದ ಭಾರತ ಅಲ್ಲ ಎಂದ ಅನುರಾಗ್‌ ಠಾಕೂರ್
‘ಗಡಿಯಲ್ಲಿ ಸೈನಿಕರು ಪೆಟ್ಟು ತಿನ್ನುತ್ತಿದ್ದಾರೆ’ ಎಂದು ರಾಹುಲ್‌ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಚೀನಾದ ಕುರಿತು ಭೀತಿ ಇರಲು ಇದು 1962ರ, ಜವಾಹರ ಲಾಲ್‌ ನೆಹರು ಕಾಲದ ಭಾರತವಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ದೇಶ ಇದಾಗಿದ್ದು, ಯಾರಿಗೂ ಭೀತಿ ಇಲ್ಲ. ನಮ್ಮ ಸೈನಿಕರು ಶೌರ್ಯ ಮೆರೆಯುತ್ತಿದ್ದಾರೆ. ಅಷ್ಟಕ್ಕೂ, ಡೋಕ್ಲಾಂ ಬಿಕ್ಕಟ್ಟಿನ ವೇಳೆ ನಮ್ಮ ಯೋಧರು ಹೋರಾಡುತ್ತಿದ್ದರೆ, ಇದೇ ರಾಹುಲ್‌ ಗಾಂಧಿ ಚೀನಾದವರ ಜತೆಗೂಡಿ ಸೂಪ್‌ ಕುಡಿಯುತ್ತಿದ್ದರು’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!