ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರ ವಿವರ ನೀಡಿ ಎಂದು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ನೀಡಿದ ಸುತ್ತೋಲೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಿಂಪಡೆದುಕೊಂಡಿದೆ.
ಈ ಕುರಿತು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೌನೀಷ್ ಮೌದ್ಗಿಲ್ ಪತ್ರ ಬರೆದಿದ್ದಾರೆ.
2023ರ ಏಪ್ರಿಲ್ 10 ರಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠ ನೀಡಿದ್ದ ಆದೇಶ ಆಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೆಪ್ಟೆಂಬರ್ 6ರಂದು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಪತ್ರದ ಮೂಲಕ ಈ ಕುರಿತಾಗಿ ಸೂಚನೆಯನ್ನು ನೀಡಿತ್ತು.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ 3 ತಿಂಗಳ ಅವಧಿಯಲ್ಲಿ ಅರ್ಜಿ ಸಲ್ಲಿಸಿದ ಕಾರ್ಯಕರ್ತರ ಮಾಹಿತಿಯನ್ನು ಸೆಪ್ಟಂಬರ್ 20ರೊಳಗೆ ಒದಗಿಸುವಂತೆ ಹೇಳಲಾಗಿತ್ತು.
ಇಲಾಖೆಯ ಮಾಹಿತಿ ಹಕ್ಕು ವಿಭಾಗದ ಅಧೀನ ಕಾರ್ಯದರ್ಶಿಯು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಅಥವಾ ಗಮನಕ್ಕೆ ತರದೆ ಪತ್ರವನ್ನು ಬರೆದಿದ್ದರು. ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದಿದ್ದಾರೆ.