ದಿಗಂತ ವರದಿ ಕಾಸರಗೋಡು:
ಮಾತೃಭಾಷಾ ದಿನಾಚರಣೆಯ ಸಂದರ್ಭ ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ಆಘಾತವಾಗುವ ರೀತಿಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿರುವ ಹೇಳಿಕೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ.
ತಿರುವನಂತಪುರದಲ್ಲಿ ಸೋಮವಾರ ನಡೆದ ಮಲಯಾಳ ಮಿಷನ್ ಮಾತೃಭಾಷಾ ದಿನಾಚರಣೆಯ ವೇಳೆ ಮುಖ್ಯಮಂತ್ರಿ ಮಲಯಾಳ ಭಾಷೆ ತಿಳಿದವರಿಗೆ ಮಾತ್ರ ಕೇರಳದಲ್ಲಿ ಸರಕಾರಿ ಉದ್ಯೋಗ ಎಂಬ ಹೇಳಿಕೆ ಕೊಡುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಲ್ಲಿ ಆತಂಕವನ್ನುಂಟು ಮಾಡಿದ್ದಾರೆ. ಕಾಸರಗೋಡಿನ ಕನ್ನಡಿಗರು ಅಲ್ಲಿನ ಮೂಲ ನಿವಾಸಿಗಳಾಗಿದ್ದು, ಈ ಹಿಂದಿನಂತೆಯೇ ಕಾಸರಗೋಡಿನಲ್ಲಿ ಮಲಯಾಳ ಭಾಷೆ ಬಗ್ಗೆ ಇರುವ ವಿನಾಯಿತಿಯನ್ನು ಮುಂದುವರಿಸಬೇಕಾಗಿದೆ. ಮಲಯಾಳ ಅರಿತವರಿಗೆ ಮಾತ್ರ ಸರಕಾರಿ ಉದ್ಯೋಗ ಎಂಬ ಕಾನೂನು ಜಾರಿಗೊಳಿಸಿದರೆ ಇದು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾದ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆಯಾಗಲಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿದೆ.
ಕೇರಳ ಸರಕಾರವು ಗಡಿನಾಡು ಕಾಸರಗೋಡಿನ ಕನ್ನಡಿಗರ ಸರಕಾರಿ ಉದ್ಯೋಗಕ್ಕೆ ಧಕ್ಕೆಯಾಗುವ ರೀತಿಯ ಯಾವುದೇ ಕ್ರಮ ಕೈಗೊಳ್ಳಬಾರದು. ಕೇರಳ ಸರಕಾರದಿಂದ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆಯಾದಲ್ಲಿ ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಕೇರಳ ಸರಕಾರವು ಕಾಸರಗೋಡಿನ ಕನ್ನಡಿಗರ ಉದ್ಯೋಗಕ್ಕೆ ಬಾಧಕ ಆಗದ ರೀತಿಯಲ್ಲಿ ಮಲಯಾಳ ಭಾಷೆ ಕಡ್ಡಾಯಗೊಳಿಸದಿರುವಂತೆ ಕರ್ನಾಟಕ ಮುಖ್ಯಮಂತ್ರಿ ಮೂಲಕ ಕೇರಳದ ಮುಖ್ಯಮಂತ್ರಿಯನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.