ಹೊಸದಿಗಂತ ವರದಿ,ಮಡಿಕೇರಿ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಗೆ ನೀಡಿರುವ ಸುಮಾರು 9ಲಕ್ಷ ಹೆಕ್ಟೇರ್ ಭೂಮಿಯನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿಯ ಅಧ್ಯಕ್ಷರೂ ಆಗಿರುವ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ನುಡಿದರು.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು 2ಲಕ್ಷ ಹೆಕ್ಟೇರ್ ಜಮೀನನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ಈ ಕುರಿತ ಆದೇಶ ಹೊರಬೀಳಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿನ ವಸತಿ ರಹಿತರ ಸಮಸ್ಯೆಗೂ ಇದರಿಂದ ಪರಿಹಾರ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಗ್ರಾಮವಾರು ಪಟ್ಟಿ ಸಿದ್ಧಪಡಿಸಲಾಗುವುದೆಂದು ಹೇಳಿದ ಅವರು, ಈ ಹಿಂದೆ ಅರಣ್ಯ ಬೆಳೆಸುವುದೂ ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಅರಣ್ಯ ಇಲಾಖೆಗೆ ಸರಕಾರಿ ಜಮೀನನ್ನು ಹಸ್ತಾಂತರಿಸಲಾಗಿತ್ತು. ಆದರೆ ಅದರ ದಾಖಲಾತಿಗಳನ್ನೂ ಅರಣ್ಯ ಇಲಾಖೆ ತಿದ್ದುಪಡಿ ಮಾಡಿಕೊಂಡಿದ್ದು, ಇದರಿಂದಾಗಿ ಹಲವಾರು ಜಿಲ್ಲೆಗಳಲ್ಲಿ ನಿವೇಶನ ರಹಿತರಿಗೆ ಭೂಮಿ ನೀಡುವುದಕ್ಕೂ ತೊಂದರೆಯಾಗುತ್ತಿದೆ. ಕೊಡಗಿನಲ್ಲೂ ಹಲವಾರು ವರ್ಷಗಳಿಂದ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕ ಕುಟುಂಬಗಳು ಸ್ವಂತ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದು, ಅಂತಹ ಕುಟುಂಬಗಳಿಗೆ ಈ ನಿರ್ಧಾರದಿಂದ ಪ್ರಯೋಜನವಾಗಲಿದೆ ಎಂದು ಬೋಪಯ್ಯ ವಿವರಿಸಿದರು.
ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ವಸತಿ ಯೋಜನೆಗಳಿಗಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಹೆಸರಿನಲ್ಲಿ ಕಾದಿರಿಸಿದ್ದ ಜಾಗಗಳು ಅತಿಕ್ರಮಣವಾಗಿರುವುದು ಕಂಡು ಬಂದಿದ್ದು, ಅವುಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುವುದು ಎಂದೂ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸರ್ಕಾರಿ ಜಮೀನು ಲೀಸ್’ಗೆ: ರಾಜ್ಯದ ಕೊಡಗು, ಚಿಕ್ಕಮಗಳೂರು ಹಾಸನ ಜಿಲ್ಲೆಯಲ್ಲಿ ಸರಕಾರಿ (ಪೈಸಾರಿ) ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ, ಕರಿಮೆಣಸು ಹಾಗೂ ಚಹಾ ಬೆಳೆದಿರುವ ಬೆಳೆಗಾರರಿಗೆ ಆ ಜಮೀನನ್ನು ಒಂದು ಕುಟುಂಬಕ್ಕೆ 25 ಎಕರೆಗೆ ಮೀರದಂತೆ 30ವರ್ಷಗಳ ಅವಧಿಗೆ ಗುತ್ತಿಗೆ (ಲೀಸ್)ಗೆ ನೀಡಲು ಅಧಿವೇಶನದಲ್ಲಿ ತೀರ್ಮಾನಿಸಲಾಗಿದೆ. 2005ಕ್ಕಿಂತ ಮೊದಲು ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಪ್ಲಾಂಟೇಷನ್ ಕೃಷಿ ಮಾಡಿರುವವರಿಗೆ ಇದು ಅನ್ವಯವಾಗಲಿದ್ದು, ಈ ನಿಯಮ ಕಂಪನಿಗಳಿಗೆ ಅನ್ವಯವಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಸ್ಪಷ್ಟಪಡಿಸಿದರು.
ನಿರ್ದಿಷ್ಟ ದೂರು ನೀಡಿ: ಕೊಡಗು ಜಿಲ್ಲೆಯಲ್ಲಿ ಕೆಲವು ಕಂಪನಿಗಳು ನೂರಾರು ಎಕರೆ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಕಾಫಿ ತೋಟಗಳನ್ನಾಗಿ ಪರಿವರ್ತಿಸಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇದುವರೆಗೂ ಲಿಖಿತವಾದ ದೂರು ಬರದಿರುವ ಕಾರಣ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಕೂಡಾ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದ ಬೋಪಯ್ಯ ಅವರು, ಇಂತಹ ನಿರ್ದಿಷ್ಟ ಪ್ರಕರಣಗಳ ಬಗ್ಗೆ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬಾಣೆ ಜಮೀನಿಗೆ ಕಂದಾಯ: ಕೊಡಗು ಜಿಲ್ಲೆಯಲ್ಲಿನ ಜಮ್ಮಾ ಸೇರಿದಂತೆ ಕೃಷಿ ಮಾಡಿದ ಅಥವಾ ಕೃಷಿ ಇಲ್ಲದ ಎಲ್ಲಾ ವಿಧದ ಬಾಣೆ ಜಮೀನುಗಳಿಗೆ ಕಂದಾಯ ವಿಧಿಸಲು ಕಂದಾಯ ಸಚಿವರು ಒಪ್ಪಿಗೆ ಸೂಚಿಸಿದ್ದು, ಇದರಿಂದಾಗಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ದೊರಕಿದಂತಾಗಲಿದೆ ಎಂದು ಅವರು ನುಡಿದರು.
ಗೋಷ್ಠಿಯಲ್ಲಿ ಬಿಜೆಪಿ ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗಿರ ಸತೀಶ್, ಪ್ರಧಾನ ಕಾರ್ಯದರ್ಶಿಗಳಾದ ಡೀನ್ ಬೋಪಣ್ಣ, ಕೋಡಿರ ಪ್ರಸನ್ನ, ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಾಜರಿದ್ದರು.