September 23, 2026
Wednesday, September 23, 2026
spot_img

ಹೃದಯಾಘಾತ, ಬಿಪಿ ನಿಯಂತ್ರಣಕ್ಕೆ ಸರ್ಕಾರದ ಹೊಸ ಹೆಜ್ಜೆ: ಉಪ್ಪಿನ ಬಳಕೆ ಶೇ.30ರಷ್ಟು ಕಡಿತದ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರದಲ್ಲಿನ ಅತಿಯಾದ ಉಪ್ಪಿನ ಬಳಕೆಯಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ.

2030ರ ವೇಳೆಗೆ ರಾಜ್ಯದ ಜನರ ಒಟ್ಟಾರೆ ಉಪ್ಪಿನ ಸೇವನೆಯನ್ನು ಶೇ.30ರಷ್ಟು ಕಡಿಮೆ ಮಾಡುವ ಗುರಿಯೊಂದಿಗೆ ‘ಕರ್ನಾಟಕ ರಾಜ್ಯ ಬಹು ವಲಯ ಉಪ್ಪು ಕಡಿತ ಮತ್ತು ಆರೋಗ್ಯಕರ ಆಹಾರ ಪದ್ಧತಿ ಉತ್ತೇಜನ ಕಾರ್ಯಯೋಜನೆ’ಯನ್ನು ಸರ್ಕಾರ ಬಿಡುಗಡೆ ಮಾಡಿದೆ.

ಅನಾರೋಗ್ಯಕರ ಆಹಾರ ಪದ್ಧತಿಗೆ ಕಡಿವಾಣ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಈ ಕಾರ್ಯಯೋಜನೆಗೆ ಚಾಲನೆ ನೀಡಿದ್ದು, ಅಧಿಕ ಉಪ್ಪಿನ ಸೇವನೆ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಗೆ ಕಡಿವಾಣ ಹಾಕುವ ಮೂಲಕ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಈ ಯೋಜನೆಯ ಉದ್ದೇಶ ಏನು?

  • ಮನೆಯ ಅಡುಗೆಯಿಂದ ಹಿಡಿದು ಹೋಟೆಲ್‌ಗಳು ಹಾಗೂ ಹೊರಗಡೆ ಸೇವಿಸುವ ಆಹಾರ, ಸಂಸ್ಕರಿತ ಮತ್ತು ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳವರೆಗೆ ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಯೋಜನೆಯಲ್ಲಿ ಒಳಗೊಂಡಿದೆ.
  • ಆಹಾರ ಉತ್ಪಾದಕರು ಸಂಸ್ಕರಿತ ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡುವಂತೆ ಉತ್ತೇಜಿಸುವುದು.
  • ಜನರಲ್ಲಿ ಆರೋಗ್ಯಕರ ಆಹಾರ ಆಯ್ಕೆಗಳ ಕುರಿತು ಜಾಗೃತಿ ಮೂಡಿಸುವುದು.
  • ಆರೋಗ್ಯ ವ್ಯವಸ್ಥೆಯ ಮೂಲಕ ಆಹಾರ ಪದ್ಧತಿ ಕುರಿತು ಸಮಾಲೋಚನೆಯನ್ನು ಬಲಪಡಿಸುವುದು.

ಒಬ್ಬರಿಗೆ ಎಷ್ಟು ಗ್ರಾಂ ಉಪ್ಪು ಸೇವನೆ ಆರೋಗ್ಯಕರ

ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ದಿನಕ್ಕೆ ಐದು ಗ್ರಾಂಗಿಂತ ಕಡಿಮೆ ಉಪ್ಪಿನ ಸೇವನೆಯತ್ತ ಜನರನ್ನು ಕೊಂಡೊಯ್ಯಲು ಯೋಜನೆ ಸಹಕಾರಿಯಾಗಲಿದೆ. ಭಾರತದಲ್ಲಿ ಸರಾಸರಿ ದೈನಂದಿನ ಉಪ್ಪಿನ ಸೇವನೆ 8ರಿಂದ 11 ಗ್ರಾಂನಷ್ಟಿದೆ ಎಂಬ ಅಂದಾಜುಗಳ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಅಧ್ಯಕ್ಷತೆಯ ತಾಂತ್ರಿಕ ಸಲಹಾ ಸಮಿತಿ ಈ ಯೋಜನೆಗೆ ವೈಜ್ಞಾನಿಕ ಹಾಗೂ ತಾಂತ್ರಿಕ ಮಾರ್ಗದರ್ಶನ ನೀಡಲಿದೆ. ಆರೋಗ್ಯ ಇಲಾಖೆ, ಶೈಕ್ಷಣಿಕ ಸಂಸ್ಥೆಗಳು, ಪೌಷ್ಟಿಕಾಂಶ ತಜ್ಞರು ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪರಿಣಿತರ ಸಹಯೋಗದಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ.

ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು ಕೇವಲ ವೈಯಕ್ತಿಕ ಆಹಾರ ಆಯ್ಕೆಯ ವಿಷಯವಾಗದೆ, ಸಾರ್ವಜನಿಕ ಆರೋಗ್ಯದ ಪ್ರಮುಖ ಭಾಗವಾಗಬೇಕು ಎಂಬ ಉದ್ದೇಶವನ್ನು ಈ ಯೋಜನೆ ಹೊಂದಿದೆ. 2030ರ ಗುರಿಯತ್ತ ಸರ್ಕಾರದ ಕ್ರಮಗಳ ಜೊತೆಗೆ ಜನರ ಆಹಾರ ಪದ್ಧತಿಯಲ್ಲೂ ಬದಲಾವಣೆ ಮೂಡಿದರೆ, ಆರೋಗ್ಯಕರ ಕರ್ನಾಟಕದತ್ತ ಈ ಪ್ರಯತ್ನ ಮಹತ್ವದ ಹೆಜ್ಜೆಯಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !