ಎಸ್‌ಎಫ್‌ಐ ಬೆದರಿಕೆ, ಸಿಪಿಎಂ ಒತ್ತಡಕ್ಕೆ ಜಗ್ಗದ ರಾಜ್ಯಪಾಲರು: ಪೊಲೀಸ್ ರಕ್ಷಣೆ ತಿರಸ್ಕರಿಸಿ ಜನರೊಂದಿಗೆ ಬೆರೆತ ಖಾನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಆಳುವ ಸಿಪಿಎಂನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐಯ ಬೆದರಿಕೆ ಮತ್ತು ಆಳುವ ಎಡರಂಗದ ಒತ್ತಡ , ಟೀಕೆಗಳ ನಡುವೆಯೇ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಪೊಲೀಸ್ ರಕ್ಷಣೆಯನ್ನು ತಿರಸ್ಕರಿಸಿ ಸೋಮವಾರ ನಗರದಲ್ಲಿ ಜನರೊಂದಿಗೆ ಮುಕ್ತವಾಗಿ ಬೆರೆತು ಅಚ್ಚರಿ ಸೃಷ್ಟಿಸಿದರು.

ಅಲ್ಲದೆ ಕಲ್ಲಿಕೋಟೆ ವಿಶ್ವವಿದ್ಯಾಲಯ ಕಾರ್ಯಕ್ರಮಕ್ಕೆ ಎಸ್‌ಎಫ್‌ಐಯ ಕರಿಬ್ಯಾನರ್, ಧ್ವಜ, ಬುಗ್ಗೆಗಳ ಪ್ರತಿಭಟನೆ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ,ತಮಗೆ ಯಾವುದೇ ಭಯವಿಲ್ಲ. ಎಸ್‌ಎಫ್‌ಐ ತಮಗೆ ಹಾನಿ ಮಾಡಲು ಬಯಸುವುದಾದಲ್ಲಿ ಹಾಗೆ ಮಾಡಬಹುದು ಎಂದು ಖಡಕ್ ತಿರುಗೇಟು ನೀಡಿದ್ದಾರೆ. ಕೇರಳದ ಪೊಲೀಸರು ದೇಶದಲ್ಲೇ ದಕ್ಷರಿದ್ದಾರೆ, ಆದರೆ ಪಿಣರಾಯಿ ವಿಜಯನ್ ಸರಕಾರ ಅವರನ್ನು ಮುಕ್ತವಾಗಿ ಕಾರ್ಯಾಚರಿಸಲು ಬಿಡುತ್ತಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದರು.

ಕೋಜಿಕ್ಕೋಡಿಗೆ ಆಗಮಿಸಿದ ರಾಜ್ಯಪಾಲ ಖಾನ್ ಅವರು ಎಸ್‌ಎಂ ಸ್ಟ್ರೀಟ್‌ಗೆ ಬಂದ ವೇಳೆ ಕಾರಿನಿಂದ ಇಳಿದು , ತಾವಿನ್ನು ಮುಂದೆ ಪೊಲೀಸರ ರಕ್ಷಣೆ ಪಡೆದುಕೊಳ್ಳುವುದಿಲ್ಲ . ಆಳುವ ಸಿಪಿಎಂನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಬೆದರಿಕೆಗೆ ತಾವು ಮಣಿಯುವುದಿಲ್ಲ ಎಂದು ಸಾರಿದರು. ಈ ಸಂದರ್ಭ ಅವರು ನಾಗರಿಕರು, ಶಾಲಾ ಸಮವಸ್ತ್ರದಲ್ಲಿದ್ದ ಮಕ್ಕಳೊಂದಿಗೆ ಮುಕ್ತವಾಗಿ ಬೆರೆತು ಸಂವಾದ ನಡೆಸಿದರು. ಈ ಮೂಲಕ ಕೇರಳದಲ್ಲಿ ಆಳುವ ಎಡರಂಗ ತಮಗೆ ಒಡ್ಡಿರುವ ಸವಾಲನ್ನು ಸ್ವೀಕರಿಸುವುದಾಗಿ ಅವರು ಪರೋಕ್ಷ ಸಂದೇಶ ನೀಡಿದ್ದಾರೆ.

ಮಿಠಾಯಿ ತೇರುವು ಎಂದೇ ಖ್ಯಾತಿ ಗಳಿಸಿದ ಸ್ವೀಟ್‌ಮೀಟ್(ಎಸ್‌ಎಂ)ನ ಮೂಲಕ ಎಸ್.ಕೆ.ಪೊಟ್ಟಕ್ಕಾಡು ಪ್ರತಿಮೆಯಿಂದ 200ಮೀ.ನಷ್ಟು ಕಾಲ್ನಡಿಗೆಯಲ್ಲೇ ಸಾಗಿದ ರಾಜ್ಯಪಾಲರನ್ನು ಅಲ್ಲಿನ ಅನೇಕ ಮಳಿಗೆಗಳ ಮಂದಿ ಆಹ್ವಾನಿಸಿ ಪ್ರೀತಿ ತೋರಿದರಲ್ಲದೆ , ತಮ್ಮಲ್ಲಿನ ವಿಶೇಷ ಖಾದ್ಯಗಳ ಕೊಡುಗೆ ನೀಡಲು ಮುಂದಾಗಿರುವ ದೃಶ್ಯಗಳು ಕಂಡುಬಂತು.ಜನರೊಂದಿಗೆ ಫೊಟೋ ತೆಗೆಸಿಕೊಂಡರಲ್ಲದೆ ಮಗುವೊಂದನ್ನು ಎತ್ತಿಕೊಂಡು ಮುದ್ದು ಮಾಡಿದರು.ನನಗೆ ಜನರಿಂದ ಅಪಾರ ಸ್ವಾಗತ ಲಭಿಸಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!