ಹೊಸ ದಿಗಂತ ವರದಿ, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಈ ಹಿಂದೆ ಘೋಷಣೆ ಮಾಡಿದ ರೂ.೫೩೦೦.೦೦ ಕೋಟಿ ಸಹಾಯಧನವನ್ನು ಶೀಘ್ರವಾಗಿ ಬಿಡುಗಡೆಗೊಳಿಸಲು ಶಿಫಾರಸ್ಸು ಮಾಡುವಂತೆ ಇಂದು ದೆಹಲಿಯಲ್ಲಿ ಸಂಸದ ಗೋವಿಂದ ಕಾರಜೋಳರವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು.
ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಜಿಲ್ಲೆಗಳ ೨,೫೫,೫೧೫ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದೊಂದಿಗೆ ಪ್ರಾರಂಭವಾದ ಭದ್ರಾ ಮೇಲ್ದಂಡೆ ಯೋಜನೆ ಈ ಎಲ್ಲಾ ಭಾಗದ ಮಹಾತ್ವಾಕಾಂಕ್ಷೆ ಯೋಜನೆಯಾಗಿದೆ. ಸುಮಾರು ೨೧,೪೭೩ ಕೋಟಿ ಅಂದಾಜು ಮೊತ್ತದ ಈ ಯೋಜನೆಗೆ ಕೇಂದ್ರ ಸರ್ಕಾರ ೨೦೨೩-೨೪ ನೇ ಸಾಲಿನ ಬಜೆಟ್‌ನಲ್ಲಿ ರೂ.೫೩೦೦.೦೦ ಕೋಟಿ ಸಹಾಯಧನವನ್ನಾಗಿ ಘೋಷಣೆ ಮಾಡಿತ್ತು.
ಮೇಲ್ಕಂಡ ನಾಲ್ಕು ಜಿಲ್ಲೆಗಳ ಬರಪೀಡಿತ ತಾಲ್ಲೂಕುಗಳಲ್ಲಿ ಸುಮಾರು ೩೬೭ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಭದ್ರಾ ಮೇಲ್ದಂಡೆ ಯೋಜನೆಯಡಿ ಹೊಂದಲಾಗಿದೆ. ಇಂತಹ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ ರೂ.೫೩೦೦.೦೦ ಕೋಟಿ ಅನುದಾನವನ್ನು ಇಲ್ಲಿಯವರೆಗೆ ಬಿಡುಗಡೆ ಮಾಡದೇ ಇರುವುದು ಕ್ಷೇತ್ರದ ಜನರಲ್ಲಿ ಅಸಮಧಾನವನ್ನು ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಅನುದಾನವನ್ನು ಬಿಡುಗಡೆ ಮಾಡಲು ಶಿಫಾರಸ್ಸು ಮಾಡುವ ಮೂಲಕ ಬರಪೀಡಿತ ಜಿಲ್ಲೆಗಳ ಜನರ ಹಿತ ಕಾಯುವಂತೆ ಮನವಿ ಮಾಡಿದ್ದಾರೆ.