ಅಗ್ನಿಪಥ…ಅಗ್ನಿಪಥ…ಅಗ್ನಿಪಥ: ಯುವಕರಿಗಾಗಿ ಭಾರತೀಯ ಸೇನೆಯ ಅವಕಾಶದ ಮಂತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವದ ಅತಿದೊಡ್ಡ ಹಾಗೂ ಬಲಿಷ್ಠ ಸೇನಾಪಡೆ ಒಂದಾಗಿರುವ ಭಾರತೀಯ ಸೇನೆ ಹೊಸತೊಂದು ಅಧ್ಯಾಯಕ್ಕೆ ತೆರೆದುಕೊಳ್ಳುತ್ತಿದೆ. ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ಮಾದರಿಯಲ್ಲಿ ಗಮನಾರ್ಹ ಬದಲಾವಣೆಗೆ ನಾಂದಿಹಾಡುವ “ಅಗ್ನಿಪಥ್” ಯೋಜನೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಅನಾವರಣಗೊಳಿಸಿದೆ.
ಯೋಜನೆಯನ್ನು ಅನಾವರಣಗೊಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದೊಂದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ.
ಭಾರತದ ಭದ್ರತೆಯನ್ನು ಬಲಪಡಿಸಲು ಅಗ್ನಿಪಥ್ ಯೋಜನೆಯನ್ನು ತರಲಾಗಿದೆ. ಈ ಯೋಜನೆಯಡಿ, ಭಾರತೀಯ ಯುವಕರಿಗೆ ಅಗ್ನಿವೀರ್ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸಲಾಗುವುದು” ಎಂದು ವಿವರಿಸಿದ್ದಾರೆ.

ಏನಿದು ಅಗ್ನಿಪಥ್‌? ಯೋಜನೆಗೆ ಯಾಕಿಷ್ಟು ಮಹತ್ವ? 
ವಿಶ್ವದ ಬಹುತೇಕ ಬಲಿಷ್ಠ ದೇಶಗಳ ಸೇನಾಪಡೆಗಳನ್ನು ಗಮನಿಸಿದರೆ, ಆದೇಶಗಳಲ್ಲಿ ಅರೆಕಾಲಿಕವಾಗಿ ಸೇನಾ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಭಾರತದಲ್ಲಿ ಸೇನಾ ನೇಮಕಾತಿ ಪ್ರಕ್ರಿಯೆಗಳು ಕಠಿಣ. ಸಮಗ್ರ ಪರೀಕ್ಷಾ ವಿಧಾನಗಳನ್ನು ಯಶಸ್ವಿಯಾಗಿ ಪೂರೈಸಿದ ಅರ್ಹರನ್ನು ಪೂರ್ಣ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆದರೆ ಅಗ್ನಿಪಥ್ ಯೋಜನೆಯು ಸಶಸ್ತ್ರ ಪಡೆಗಳಲ್ಲಿನ ನೇಮಕಾತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಉದ್ದೇಶಿಸಿದೆ.
ಅಗ್ನಿಪಥ್ ಯೋಜನೆಯು ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಗೆ ಯುವಕರನ್ನು ಸೇರ್ಪಡೆಗೊಳ್ಳಲು ಪ್ಯಾನ್ ಇಂಡಿಯಾ ಮೆರಿಟ್ ಆಧಾರಿತ ನೇಮಕಾತಿ ಯೋಜನೆಯಾಗಿದೆ. ಈ ಯೋಜನೆಯು ಯುವಕರಿಗೆ ಸಶಸ್ತ್ರ ಪಡೆಗಳ ನಿಯಮಿತ ಕೇಡರ್‌ನಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸುತ್ತದೆ. ತರಬೇತಿ ಅವಧಿ ಸೇರಿದಂತೆ 4 ವರ್ಷಗಳ ಸೇವಾ ಅವಧಿಗೆ ಯುವಕರನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ‘ಅಗ್ನಿಪಥ’ ಯೋಜನೆಯಡಿ ನೇಮಕಗೊಂಡವರೆಲ್ಲರನ್ನು ‘ಅಗ್ನಿವೀರ್’ ಎಂದು ಕರೆಯಲಾಗುವುದು.

ಈ ಬಗ್ಗೆ ಸಮಗ್ರವಾಗಿ ಮಾಹಿತಿ ಹಂಚಿಕೊಂಡಿರುವ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಈ ಯೋಜನೆಯು 14 ಲಕ್ಷಕ್ಕೂ ಹೆಚ್ಚು ಬಲಿಷ್ಠ ಸಶಸ್ತ್ರ ಪಡೆಗಳ ವೃತ್ತಿಪರತೆ, ಮಿಲಿಟರಿ ನೀತಿ ಮತ್ತು ಹೋರಾಟದ ಮನೋಭಾವದ ಮೇಲೆ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಯುವಕರು ಮತ್ತು ಸೇನೆಯಲ್ಲಿನ ಅನುಭವದ ನಡುವೆ ಅತ್ಯುತ್ತಮ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ‘ಅಗ್ನಿವೀರ್ಸ್’ಗೆ ಉತ್ತಮ ವೇತನ ಪ್ಯಾಕೇಜ್ ಮತ್ತು 4 ವರ್ಷಗಳ ಸೇವೆಯ ನಂತರ ನಿರ್ಗಮನ ನಿವೃತ್ತಿ ಪ್ಯಾಕೇಜ್ ನೀಡಲಾಗುವುದು ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳ ಬಳಿಕ, 25% ಅಗ್ನಿವೀರ್‌ಗಳನ್ನು ಅರ್ಹತೆ, ಇಚ್ಛೆ ಮತ್ತು ವೈದ್ಯಕೀಯ ಫಿಟ್‌ನೆಸ್ ಆಧಾರದ ಮೇಲೆ ನಿಯಮಿತ ಕೇಡರ್‌ನಲ್ಲಿ ಉಳಿಸಿಕೊಳ್ಳಲಾಗುತ್ತದೆ ಅಥವಾ ಮರು-ಸೇರ್ಪಡೆಗೊಳಿಸಲಾಗುತ್ತದೆ. ಆ ಬಳಿಕ ಅವರಿಗೆ ಇನ್ನೂ 15 ವರ್ಷಗಳ ಪೂರ್ಣ ಅವಧಿಗೆ ಸೇವೆ ಸಲ್ಲಿಸಲು ಅವಕಾಶವಿದೆ. ಅಗ್ನಿವೀರ್‌ ಗಳಿಗೆ 11-12 ಲಕ್ಷದ “ಸೇವಾ ನಿಧಿ” ಪ್ಯಾಕೇಜ್‌ ಸಿಗಲಿದೆ. ಜೊತೆಗೆ ಕೌಶಲ್ಯ ಪ್ರಮಾಣಪತ್ರಗಳು ಮತ್ತು ನಿವೃತ್ತಿ ನಂತರ ಮುಂದಿನ ವೃತ್ತಿಜೀವನ ರೂಪಿಸಿಕೊಳ್ಳಲು ಬ್ಯಾಂಕ್ ಸಾಲಗಳನ್ನು ಸುಲಭವಾಗಿ ಒದಗಿಸಿಕೊಡಲಾಗುತ್ತದೆ.

ವಯಸ್ಸಿನ ಮಿತಿ:
17.5 ರಿಂದ 21 ನಡುವಿನ ವಯಸ್ಕರನ್ನು ಅಗ್ನಿವೀರ್‌ಗಳನ್ನಾಗಿ ನೇಮಿಸಿಕೊಳ್ಳಲಾಗುವುದು.

ನೇಮಕಾತಿ:
ಅಭ್ಯರ್ಥಿಗಳನ್ನು 4 ವರ್ಷಗಳ ಸೇವಾ ಅವಧಿಗೆ ಆಯಾ ಸೇವಾ ಕಾಯಿದೆಯಡಿಯಲ್ಲಿ ನೋಂದಾಯಿಸಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಸ್ವಯಂಸೇವೆಯಡಿಯಲ್ಲಿ ಸಾಮಾನ್ಯ ಕೇಡರ್‌ಗೆ ದಾಖಲಾಗಲು ಅರ್ಜಿ ಸಲ್ಲಿಸಬಹುದು. ಕಠಿಣ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಯೊಂದಿಗೆ ಈ ಯೋಜನೆಯು ಸುಧಾರಿತ ಯುದ್ಧ ಸನ್ನದ್ಧತೆಗೆ ಯುವಕರಿಗೆ ತರಬೇತಿ ನೀಡುತ್ತದೆ.

ವೇತನ ಸೌಲಭ್ಯ:
ಅಗ್ನಿವೀರರಿಗೆ ತಿಂಗಳಿಗೆ 30,000 ರೂ. ಗಳಿಂದ ಪ್ರಾರಂಭಿಸಿ, ನಂತರ 45,000 ರುಪಾಯಿ ಮಾಸಿಕ ವೇತನಕ್ಕೂ ವಿಸ್ತರಿಸಲಿದೆ.  ಹುತಾತ್ಮರಾದ ಎಲ್ಲಾ ಅಗ್ನಿವೀರರಿಗೆ, ಸೇವೆ ಸಲ್ಲಿಸದ ಸೇವಾ ವರ್ಷಗಳ ಸಂಪೂರ್ಣ ಪಾವತಿಯನ್ನು ನೀಡಲಾಗುತ್ತದೆ.

ಅತ್ಯುತ್ತಮ ಸೇವಾಸೌಲಭ್ಯಗಳು:
ಮರಣ ಪರಿಹಾರವಾಗಿ 48 ಲಕ್ಷ ರೂ.ಗಳ ರಹಿತ ಜೀವ ವಿಮಾ ರಕ್ಷಣೆ ಸಿಗಲಿದೆ. ಸೇವಾವಧಿ ಮರಣಕ್ಕೆ ಹೆಚ್ಚುವರಿ 44 ಲಕ್ಷ ರೂ. ಗಳನ್ನು ಸರ್ಕಾರ ನೀಡಲಿದೆ. ಸವಾವಧಿಯಲ್ಲಿ ಅಂಗವೈಕಲ್ಯಕ್ಕೆ ಸಹ ಪರಿಹಾರ ಸಿಗಲಿದೆ. ವೈದ್ಯಕೀಯ ಅಧಿಕಾರಿಗಳು ಪರಿಗಣಿಸಿದ ಶೇಕಡಾವಾರು ಅಂಗವೈಕಲ್ಯವನ್ನು ಆಧರಿಸಿ ಪರಿಹಾರ ಸಿಗಲಿದೆ. ಪೂರ್ಣ ವೈಕಲ್ಯಕ್ಕೆ 44 ಲಕ್ಷ, ಭಾಗಶಃ ವೈಕಲ್ಯಕ್ಕೆ 25 ರಿಂದ  15 ಲಕ್ಷ ರೂ. ಪರಿಹಾರ ದೊರಕಲಿದೆ. ಭಾರತೀಯ ಸೇನೆಗೆ ಸೇರಬೇಕೆಂಬ ಲಕ್ಷಾಂತರ ಯುವಕರ ಕನಸು ಇದೀಗ ಅಗ್ನಿಪಥ್‌ ಯೋಜನೆಯ ಮೂಲಕ ಕೈಗೂಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!