ಗುಜರಿ-ರದ್ದಿ ಮಾರಿ ಕೇಂದ್ರ ಸರ್ಕಾರದ ಇಲಾಖೆಗಳು ಗಳಿಸಿದ ಹಣವೆಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸೇರಿದ ಇಲಾಖೆಗಳು ಸ್ವಚ್ಛತಾ ಕಾರ್ಯಸೂಚಿ ಅನುಷ್ಠಾನ ಮಾಡುತ್ತವೆ. ವಿಶೇಷವಾಗಿ, ತಮ್ಮ ವ್ಯಾಪ್ತಿಯಲ್ಲಿರುವ ಉಪಯೋಗಕ್ಕೆ ಬಾರದ ವಾಹನಗಳು, ಲ್ಯಾಪ್ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು, ರದ್ದಿಯಾಗಿರುವ ಕಡತಗಳು ಇವೆಲ್ಲದರ ವಿಲೇವಾರಿ ನಡೆಯುತ್ತದೆ. ಈ ಬಾರಿ ಅಕ್ಟೋಬರ್ ತಿಂಗಳಿನಲ್ಲಿ ಈ ರೀತಿ ಗುಜರಿ-ರದ್ದಿಗಳ ಸಮರ್ಪಕ ವಿಲೇವಾರಿಯ ಮಾರಾಟದಿಂದ ಕೇಂದ್ರಕ್ಕೆ ದೊರೆತಿರುವ ಹಣವೆಷ್ಟು ಗೊತ್ತೇ? 550 ಕೋಟಿ ರುಪಾಯಿಗಳಿಗೂ ಅಧಿಕ ಎಂಬುದು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ವಿಭಾಗದ ಕಾರ್ಯದರ್ಶಿ ವಿ ಶ್ರೀನಿವಾಸ ಅವರು ಮಾಧ್ಯಮವೊಂದಕ್ಕೆ ನೀಡಿರುವ ಮಾಹಿತಿ.

ಈ ಬಗೆಯ ಸ್ವಚ್ಛತೆ ಮತ್ತು ವಿಲೇವಾರಿ ಅಭಿಯಾನವು ನಡೆಯುತ್ತಿರುವ ಮೂರನೇ ವರ್ಷ ಇದಾಗಿದೆ. ಈ ಬಾರಿ ಮಿಲಿಟರಿ ಮತ್ತು ಅರೆಸೇನೆಗಳಿಗೆ ಸೇರಿದ ಕಂಟೋನ್ಮೆಂಟ್ ಪ್ರದೇಶಗಳು ಮತ್ತು ಕಚೇರಿಗಳಲ್ಲಿ ಅಕ್ಟೋಬರ್ 2ರಿಂದ 31ರವರೆಗೆ ಈ ಅಭಿಯಾನ ನಡೆಸಲಾಗಿತ್ತು. ಸುಮಾರು 2.58 ಲಕ್ಷ ಕಚೇರಿಗಳು ಈ ವಿಲೇವಾರಿ ಕಾರ್ಯದಡಿ ಬಂದಿದ್ದು ಸುಮಾರು 26 ಲಕ್ಷ ಕಡತಗಳ ವಿಲೇವಾರಿಯಾಗಿದೆ.

ಈ ವರ್ಷದ ಅಭಿಯಾನದಲ್ಲಿ ಕೆಟ್ಟ ಸ್ಥಿತಿಯಲ್ಲಿರುವ ವಾಹನಗಳ ಮಾರಾಟ, ಹಳತಾದ ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು, ಫೋಟೊಕಾಪಿಯರ್‌ಗಳು, ಪ್ರಿಂಟರ್‌ ಇಂತಹ ಎಲೆಕ್ಟ್ರಾನಿಕ್ ಗುಜರಿಗಳ ಮಾರಾಟಗಳು ಮುಖ್ಯವಾಗಿದ್ದವು.

ಈ ಹಿಂದಿನ ವರ್ಷಗಳೂ ಸೇರಿದಂತೆ ಒಟ್ಟಾರೆ ಮೂರು ವರ್ಷಗಳ ಅಕ್ಟೋಬರ್ ತಿಂಗಳಿನ ಈ ಅಭಿಯಾನವನ್ನು ಪರಿಗಣಿಸಿದರೆ ನಾಲ್ಕು ಲಕ್ಷಕ್ಕೂ ಹೆಚ್ಚು ಕಚೇರಿ ಸ್ಥಳಗಳು, 96 ಲಕ್ಷ ಕಡತಗಳು, ಒಟ್ಟಾರೆ 355 ಲಕ್ಷ ಚದರ ಅಡಿ ಜಾಗವನ್ನು ಈ ಅಭಿಯಾನ ಮುಟ್ಟಿದೆ. ಮೂರೂ ವರ್ಷಗಳಿಂದ ಬಂದಿರುವ ಒಟ್ಟೂ ಆದಾಯ ರುಪಾಯಿ 1,116 ಕೋಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!