ಕೊಡಗಿನಲ್ಲಿ ವನ್ಯಪ್ರಾಣಿಗಳ ಹಾವಳಿಗೆ ಸರಕಾರ-ಅರಣ್ಯ ಇಲಾಖೆ ನಿರ್ಲಕ್ಷ್ಯ ಕಾರಣ: ವೀಣಾ ಅಚ್ಚಯ್ಯ ಆರೋಪ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಸೇರಿದಂತೆ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿರುವುದಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಆರೋಪಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕಳೆದ 2 ವರ್ಷಗಳಲ್ಲಿ 6 ಮಾನವ ಜೀವ ಹಾನಿ ಮತ್ತು ಅನೇಕ ಜಾನುವಾರುಗಳು ಸಾವನ್ನಪ್ಪಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ, ಕೊಡಗಿನ ಜನರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ. ಕಾಡಾನೆಗಳು ತೋಟಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿದ್ದರೆ, ಹುಲಿಗಳು ಮನುಷ್ಯರನ್ನೇ ಆಹಾರ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ದುರಂತ ಎಂದು ಟೀಕಿಸಿದರು.

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಗೆ ಕೋಟ್ಯಂತರ ಅನುದಾನ ಬರುತ್ತದೆ. ಆದರೆ ವನ್ಯಜೀವಿಗಳು ಆಹಾರವನ್ನು ಅರಸಿ ಜನವಾಸದ ಪ್ರದೇಶಗಳಿಗೆ ದಾಳಿ ಇಡುತ್ತಿವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಕಳೆದ 25 ವರ್ಷಗಳಿಂದ ಬಿಜೆಪಿಯವರೇ ಶಾಸಕರುಗಳಾಗಿದ್ದಾರೆ. ಸಂಸದರು ಬಿಜೆಪಿಯವರೇ ಆಗಿದ್ದಾರೆ. ಆದರೆ ಕೊಡಗನ್ನು ಕಾಡುತ್ತಿರುವ ವನ್ಯಜೀವಿಗಳ ದಾಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರಕ್ಕೆ ಯಾರೂ ಪ್ರಯತ್ನಿಸಿಲ್ಲ ಎಂದು ವೀಣಾ ಅಚ್ಚಯ್ಯ ದೂರಿದರು.

ಕೊಡಗಿಗೆ ಹೊರಗಿನ ಹುಲಿಗಳು: ಗಾಯಗೊಂಡು ನಿಸ್ತೇಜಗೊಂಡ ಹುಲಿಗಳೇ ದಕ್ಷಿಣ ಕೊಡಗು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಜರೋಷವಾಗಿ ಮುಖ್ಯರಸ್ತೆಗಳಲ್ಲೇ ಸಂಚರಿಸುತ್ತಿವೆ. ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಜಿಲ್ಲೆಯ ಹೊರ ಭಾಗದಿಂದ ಹುಲಿಗಳು ಕೊಡಗನ್ನು ಪ್ರವೇಶಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಬೇರೆ ಜಿಲ್ಲೆಗಳಲ್ಲಿ ಸೆರೆಯಾದ ಹುಲಿಗಳನ್ನು ಇಲ್ಲಿ ತಂದು ಬಿಡುತ್ತಿರುವ ಬಗ್ಗೆ ಜನರಲ್ಲಿ ಅನುಮಾನಗಳು ಮೂಡುತ್ತಿದೆ. ತಕ್ಷಣ ಅರಣ್ಯ ಇಲಾಖೆ ಹುಲಿ ದಾಳಿಯ ಕುರಿತು ಕೊಡಗಿನ ಜನರಿಗೆ ಸ್ಪಷ್ಟೀಕರಣ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಹುಲಿ ಮತ್ತು ಕಾಡಾನೆಗಳ ಉಪಟಳ ಹೆಚ್ಚು ಇರುವ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ವಿಶೇಷ ಸಭೆ ನಡೆಸಿ ವಿಶ್ವಾಸ ಮೂಡಿಸಬೇಕು. ವನ್ಯಜೀವಿಗಳ ಆತಂಕವಿರುವ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಅರಣ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ವನ್ಯಜೀವಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಕೇಂದ್ರ ಸರ್ಕಾರದ ಮೂಲಕ ಯೋಜನೆ ರೂಪಿಸಲು ಸಂಸದರು ಮುಂದಾಗಬೇಕು ಎಂದೂ ಅವರು ಹೇಳಿದರು.

ಬಾಣೆ ಗೊಂದಲ:
ಈಗಾಗಲೇ ಇತ್ಯರ್ಥವಾಗಿರುವ ಬಾಣೆ ಜಾಗದ ವಿಚಾರದಲ್ಲಿ ಕಂದಾಯ ಸಚಿವರು ಮತ್ತೆ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ಬಾಣೆ ಜಾಗ ನೀಡುವುದಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನೀಡಿದ ಹೇಳಿಕೆ ಅಧಿಕಾರಿಗಳಿಂದಾದ ತಪ್ಪಿನಿಂದಾಗಿ ಹೀಗಾಗಿದೆ ಎಂದು ಕೊಡಗಿನ ಜನಪ್ರತಿನಿಧಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಇದು ತಮ್ಮ ಸರ್ಕಾರದ ಒಬ್ಬ ಸಚಿವರನ್ನು ಜನರ ಟೀಕೆಯಿಂದ ರಕ್ಷಣೆ ಮಾಡುವ ಯತ್ನವಾಗಿದೆಯೇ ಹೊರತು ಜನರ ಮೇಲಿನ ಪ್ರೀತಿಯಿಂದಲ್ಲ. ಬಾಣೆ ಜಮೀನು ಹೊಂದಿರುವವರು ಈಗಾಗಲೇ ಆತಂಕಕ್ಕೊಳಗಾಗಿದ್ದು, ಖುದ್ದು ಕಂದಾಯ ಸಚಿವರೇ ಈ ಬಗ್ಗೆ ಬಹಿರಂಗ ಸ್ಪಷ್ಟೀಕರಣ ನೀಡಬೇಕು. ಕಂದಾಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಕೊಡಗಿನಲ್ಲಿ ವಿಶೇಷ ಸಭೆ ನಡೆಸಿ ಜನರ ಅಹವಾಲನ್ನು ಸ್ವೀಕರಿಸಬೇಕು ಎಂದು ವೀಣಾ ಅಚ್ಚಯ್ಯ ಒತ್ತಾಯಿಸಿದರು.

ರಸ್ತೆಗಳ ಅಭಿವೃದ್ಧಿ ಶೀಘ್ರ ಪೂರ್ಣಗೊಳಿಸಿ: ಜಿಲ್ಲೆಯ ಬಹುತೇಕ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ, ರಸ್ತೆಗಳ ಅಭಿವೃದ್ಧಿಗೆಂದು ಶಾಸಕರುಗಳು ನಿರಂತರ ಭೂಮಿಪೂಜೆ ಮಾಡಿ ಗುದ್ದಲಿ ಸವೆಯಿತೇ ಹೊರತು ಎಲ್ಲೂ ರಸ್ತೆಗಳು ಅಭಿವೃದ್ಧಿಯಾದ ಕುರುಹುಗಳು ಕಾಣುತ್ತಿಲ್ಲ. ಇನ್ನು ಕೇವಲ ಎರಡು ತಿಂಗಳಿನಲ್ಲಿ ಮಳೆಗಾಲ ಆರಂಭವಾಗುತ್ತದೆ. ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ ಚುನಾವಣೆ ಬಹಿಷ್ಕಾರದ ಕೂಗು ಯಾಕೆ ಕೇಳಿ ಬರುತ್ತಿತ್ತು ಎಂದು ಅವರು ಪ್ರಶ್ನಿಸಿದರು.

ಜಿಲ್ಲೆಯ ಶಾಸಕರುಗಳು ಎಚ್ಚೆತ್ತುಕೊಂಡು ತಕ್ಷಣ ರಸ್ತೆಗಳ ಅಭಿವೃದ್ಧಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇವಲ ಭೂಮಿಪೂಜೆ ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆಯನ್ನು ಅನುಸರಿಸಬಾರದು. ರಸ್ತೆಗಳ ಅಭಿವೃದ್ಧಿಗೆ ನಿಜವಾಗಿಯೂ ಸರ್ಕಾರ ಅನುದಾನ ನೀಡಿದೆಯೇ ಅಥವಾ ಇಲ್ಲವೇ ಎಂಬ ಸತ್ಯವನ್ನು ಶಾಸಕರುಗಳು ಜನರ ಮುಂದಿಡಬೇಕು. ಕೊಡಗಿನ ಜನರನ್ನು ಸಮಾಧಾನಪಡಿಸುವ ಉದ್ದೇಶದಿಂದ ಬಜೆಟ್’ನಲ್ಲಿ 100 ಕೋಟಿ ರೂ. ಗಳನ್ನು ಘೋಷಿಸಿದಂತಿದ್ದು, ಈ ಅನುದಾನದಲ್ಲಿ ಕೊಡಗಿನ ರಸ್ತೆಗಳ ಅಭಿವೃದ್ಧಿ ಸಾಧ್ಯವೇ. ಅಲ್ಪಪ್ರಮಾಣದ ಅನುದಾನವನ್ನು ಜಿಲ್ಲೆಯ ಶಾಸಕರುಗಳು ಯಾಕೆ ತಿರಸ್ಕರಿಸಲಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಕಟ್ಟಡಗಳ ಕಾಮಗಾರಿ ಇನ್ನೂ ಕೂಡ ಪೂರ್ಣಗೊಳ್ಳದೆ ಅರ್ಧದಲ್ಲೇ ನಿಂತಿದೆ. ಕನ್ನಡ ಸುವರ್ಣ ಸಮುಚ್ಚಯ ಭವನ, ಕೊಡವ ಹೆರಿಟೇಜ್ ಕೇಂದ್ರ, ಹೆಚ್ಚುವರಿ ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ಹಲವು ಕಟ್ಟಡಗಳು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಇವುಗಳನ್ನು ಪೂರ್ಣಗೊಳಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದಿರುವ ವೀಣಾ ಅಚ್ಚಯ್ಯ, ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರಿಗೆ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ. ಚುನಾವಣೆಗಳಲ್ಲಿ ಗೆಲುವು ಸಾಧಿಸುವುದಷ್ಟೇ ಇವರ ಅಜೆಂಡಾವಾಗಿದ್ದು, ಕೊಡಗಿನ ಜನರ ಹಿತ ಬೇಡವಾಗಿದೆ. ಜನರು ಕೂಡಾ ಇವರುಗಳಿಂದ ಬೇಸತ್ತಿದ್ದು, ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ರವಿ ಗೌಡ, ಗಿರೀಶ್, ಫ್ಯಾನ್ಸಿ ಪಾರ್ವತಿ, ಪ್ರಭು ರೈ, ಬೊಳ್ಳಜಿರ ಬಿ.ಅಯ್ಯಪ್ಪ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!