ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ಭಾಗ್ಯ! ಜಾರಿ ಯಾವಾಗ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರಾವಳಿ ಜಿಲ್ಲೆಗಳ ಪ್ರಮುಖ ಆಹಾರ ಧಾನ್ಯವಾದ ಕುಚಲಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಇಂದು (ಗುರುವಾರ) ವಿಶೇಷ ಸಭೆ ನಡೆಯಿತು.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರ ಪ್ರಮುಖ ಆಹಾರ ಧಾನ್ಯ ಕುಚಲಕ್ಕಿ ಆಗಿದ್ದು, ಈ ಭಾಗದ ಜನರಿಗೆ ಕುಚಲಕ್ಕಿ ಬಹುದಿನಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು ಈಗಾಗಲೆ ಕೇರಳ ರಾಜ್ಯಕ್ಕೆ ರಾಜ್ಯದ ನಿಯೋಗ ಭೇಟಿ ನೀಡಿ ಅಧ್ಯಯನ ನಡೆಸಿರುವುದಾಗಿ ತಿಳಿಸಿದರು. ಕರಾವಳಿ ಜಿಲ್ಲೆಗಳಿಗೆ ಪ್ರತಿ ತಿಂಗಳು 1ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದ್ದು, ವರ್ಷಕ್ಕೆ 12ಲಕ್ಷ ಕ್ವಿಂಟಾಲ್ ಅವಶ್ಯಕತೆಯಿದೆ. ಹಾಗಾಗಿ ವರ್ಷಕ್ಕೆ ಕನಿಷ್ಠ 18ಲಕ್ಷ ಕ್ವಿಂಟಾಲ್ ಭತ್ತ ಬೇಕು ಎಂದು ಸಚಿವರು ತಿಳಿಸಿದರು.

ಜಯ, ಜ್ಯೋತಿ, ಎಂಎಫ್4 ಅಂತಹ ಭತ್ತದ ತಳಿಗಳಿಂದ ಮಾತ್ರ ಕುಚಲಕ್ಕಿ ಮಾಡಲು ಸಾಧ್ಯವಿದ್ದು, ಈ ಎರಡು ಜಿಲ್ಲೆಗಳಿಂದ ಕೇವಲ ಎರಡೂವರೆ ಲಕ್ಷ ಕ್ವಿಂಟಾಲ್ ಭತ್ತ ಮಾತ್ರ ಉತ್ಪಾದನೆಯಾಗುತ್ತಿದೆ. ಇನ್ನುಳಿದ ಭತ್ತವನ್ನು ಮೈಸೂರು, ಮಂಡ್ಯ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಿಂದ ಖರೀದಿಗೆ ಕ್ರಮ ವಹಿಸಲಾಗುವುದು. ಆದರೂ ಪೂರ್ಣ ಪ್ರಮಾಣದ ಭತ್ತ ಸಿಗುತ್ತಿಲ್ಲವಾದ್ದರಿಂದ ಹೆಚ್ಚುವರಿ ಬೇಡಿಕೆಯನ್ನು ಕೇರಳ ಮತ್ತು ತೆಲಂಗಾಣ ಜಿಲ್ಲೆಗಳಿಂದ ಭತ್ತ ಪೂರೈಸಿಕೊಳ್ಳಲು ಯೋಜಿಸಲಾಗಿದೆ. ಈ ಸಂಬಂಧ ಈ ವಾರಾಂತ್ಯದಲ್ಲಿ ಮತ್ತೊಂದು ಅಧ್ಯಯನ ತಂಡ ತೆಲಂಗಾಣಕ್ಕೆ ಭೇಟಿ ನೀಡಲಿದೆ ಎಂದರು.

ಅಧ್ಯಯನ ತಂಡದ ವರದಿ ಆಧರಿಸಿ ಕರಾವಳಿ ಜಿಲ್ಲೆಗಳ ಶಾಸಕರು ಹಾಗೂ ಸಂಸದರ ನಿಯೋಗ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಬರುವ ವರ್ಷದಿಂದಲೇ ಈ ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!