ಹೊಸದಿಗಂತ ವರದಿ ಹುಬ್ಬಳ್ಳಿ:
ಪಾಕಿಸ್ತಾನ ಪರ ಘೋಷಣೆ ಕೂಗುವವರಿಗೆ, ಗಲಭೆಕೋರರಿಗೆ, ರಸ್ತೆಯಲ್ಲಿ ತಲ್ವಾರ್ ಹಿಡಿದು ಬೆದರಿಕೆ ಹಾಕುವವರಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡುತ್ತಿರುವುದು ದುರದೃಷ್ಟ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಗಲಾಟೆ ವಿಚಾರದಲ್ಲಿ ರಾಜ್ಯ ಸರ್ಕಾರ ತೃಷ್ಟೀಕರಣದ ಪರಮಾವಧಿ ತಲುಪಿದೆ. ಅಲ್ಲಿ ದೊಡ್ಡ ಮಟ್ಟದ ಗಲಭೆಯಾದರು ಕಾಂಗ್ರೆಸ್ ನಾಯಕರು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟಾದರೂ ಸಹ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ತುಷ್ಟೀಕರಣ ಮಾಡುವುದರಿಂದ ಮತಾಂಧ ಶಕ್ತಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಈ ಸರ್ಕಾರದ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇದೆಯೇ ಎಂಬ ಅನುಮಾನದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪೊಲೀಸರ ಜೊತೆ ಜನರ ಹತ್ಯೆಯಾಗುತ್ತಿತ್ತು. ಇಂತಹ ಗಲಭೆ ಸೃಷ್ಟಿಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್‌ಗೆ ಕೇವಲ ಅಲ್ಪಸಂಖ್ಯಾತರು ಮತ ಹಾಕಿಲ್ಲ ಎಂಬುವುದು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರ ದೇಶ ದ್ರೋಹಿಗಳ, ಗಲಭೆಕೋರರ ಪರ ನಿಲ್ಲುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಪಾಕಿಸ್ತಾನಿ ಭಯೋತ್ಪಾದಕರ ಪರವಾಗಿ ನಿಲ್ಲುವುದಕ್ಕೆ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಬಗ್ಗೆ ನಾವು ತೀವ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರಾದ ಶಾಮನೂರು ಶಿವಶಂಕರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ. ನಾವೇನೂ ಜಾಸ್ತಿ ಹೇಳಲ್ಲ ಎಂದರು.
ಪಿಎಫ್‌ಐ ಗೆ ಬೆಂಬಲ ಸೂಚಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ನಿಯಮವಾಗಿದೆ. ಕಾಂಗ್ರೆಸ್ ಪಿಎಫ್‌ಐ ಸೇರಿದಂತೆ ದೇಶದ್ರೋಹಿಗಳಿಗೆ ಪ್ರೋತ್ಸಾಹಿಸುವುದಾಗಿದೆ. ಹು-ಧಾ ಉಗ್ರರ ನಂಟಿನ ಬಗ್ಗೆ ಪ್ರತಿಕ್ರಿಸಿದ ಅವರು, ಇದು ಬಹಳ ಗಂಭೀರ ವಿಚಾರವಾಗಿದೆ. ಗೃಹ ಇಲಾಖೆ ದೆಹಲಿ ಪೊಲೀಸರ ಜೊತೆ ಸಂಪರ್ಕ ಮಾಡುವ ಮೂಲಕ ಸೂಕ್ತ ತನಿಖೆ ನಡೆಸಬೇಕು. ಕಾಂಗ್ರೆಸ್ ಸರ್ಕಾರ ಈ ರೀತಿ ದೇಶದ್ರೋಹಿ ಕೆಲಸ ಮಾಡುವವರ ಪ್ರಕರಣ ಹಿಂತೆಗೆದುಕೊಂಡರೆ ಉಗ್ರರ ತಾಣವಾಗೋದು ಸಹಜ ಎಂದು ನುಡಿದರು.