ಸಾಮಾಜಿಕವಾಗಿ ಅಸಮತೋಲನವನ್ನು ಹೋಗಲಾಡಿಸಲು ಸರ್ಕಾರ ಕಟಿಬದ್ಧ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಹೊಸದಿಗಂತ ವರದಿ, ಕಾರವಾರ:

ಹಿಂದುಳಿದ ಹಾಗೂ ಸಾಮಾಜಿಕವಾಗಿ ಅಸಮತೋಲನವನ್ನು ಹೋಗಲಾಡಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಆಚರಿಸಲಾದ ೭೩ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಆಶಯದಿಂದ ನಮ್ಮ ಸರ್ಕಾರ ದೂರದೃಷ್ಟಿಯ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಾಮಾಜಿಕ ಭದ್ರತಾ ಯೋಜನೆಗಳಡಿ, ಸಂಧ್ಯಾ ಸುರಕ್ಷಾ, ವಿಧವೆಯರ ಹಾಗೂ ಅಂಗವಿಕಲರ ಮಾಸಾಶನ ಮೊತ್ತವನ್ನು ಹೆಚ್ಚಿಸಿ ಹಿರಿಯ ನಾಗರಿಕರು, ವಿಕಲಚೇತನರಲ್ಲಿ ಹೊಸ ಚೈತನ್ಯ ತುಂಬುವ ಪ್ರಯತ್ನ ಮಾಡಲಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ರೂಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಲಾಗುತ್ತಿದ್ದು, ಜಿಲ್ಲೆಗೊಂದು ಸರಕಾರಿ ಗೋಶಾಲೆ ತೆರೆಯುವ ಯೋಜನೆಯಡಿಯಲ್ಲಿ, ಜಿಲ್ಲೆಯ ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದುಸುಗಿ ಗ್ರಾಮದಲ್ಲಿ ಸರ್ಕಾರಿ ಗೋಶಾಲೆ ಪ್ರಾರಂಭಿಸಲು ಸ್ಥಳ ನಿಗದಿಪಡಿಸಲಾಗಿದೆ. ಇದಕ್ಕಾಗಿ ರೂ.36 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 13613 ವಿದ್ಯಾರ್ಥಿಗಳಿಗೆ ಒಟ್ಟೂ ರೂ.3,36,01,000 (ರೂಪಾಯಿ ಮೂರು ಕೋಟಿ ಮುವತ್ತಾರು ಲಕ್ಷ ಒಂದು ಸಾವಿರ) ವಿದ್ಯಾರ್ಥಿ ವೇತನ ಡಿ.ಬಿ.ಟಿ ಮೂಲಕ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುತ್ತದೆ. ಹಿಂದುಳಿದ ವರ್ಗ ಸಮಾಜ ಕಲ್ಯಾಣ ಇಲಾಖೆ ಮತ್ತು ವಸತಿ ಶಿಕ್ಷಣ ಇಲಾಖೆಯಲ್ಲಿ ಕಲಿಯುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆಯ ಕಲೆ ತರಬೇತಿಗಾಗಿ ಅಗತ್ಯ ಭೂಮಿಕೆ ಸಿದ್ದಗೊಳಿಸಲಾಗಿದು, ಈಗಾಗಲೇ ತರಬೇತಿ ಆರಂಭಗೊoಡಿದೆ. 101 ಅಂತರ್‌ ಜಾತಿ ವಿವಾಹದ ಫಲಾನುಭವಿಗಳಿಗೆ ಮತ್ತು 03 ಪರಿಶಿಷ್ಟ ಜಾತಿಯ ಒಳ ಪಂಗಡದಲ್ಲಿ ವಿವಾಹವಾದ ಫಲಾನುಭವಿಗಳಿಗೆ ಒಟ್ಟು ರೂ.292.75 ಲಕ್ಷ ಪ್ರೋತ್ಸಾಹಧನ ಮಂಜೂರು ಮಾಡಲಾಗಿರುತ್ತದೆ ಎಂದರು.
ಸ್ವಚ್ಛ ಸರ್ವೇಕ್ಷಣ 2021 ನೇ ಸಾಲಿನಲ್ಲಿ ನಮ್ಮ ಜಿಲ್ಲೆಯ ಕುಮಟಾ ಪುರಸಭೆಗೆ ‘ಬೆಸ್ಟ್ ಸಸ್ಟೇನೆಬಲ್ ಸಿಟಿ’ ಎಂದು 25000 ಜನಸಂಖ್ಯೆಯಲ್ಲಿ ಸೌತ್ ಝೊನ್‌ನಲ್ಲಿ ರಾಷ್ಟç ಪ್ರಶಸ್ತಿ ದೊರಕಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಸ್ವಚ್ಛ ಸರ್ವೇಕ್ಷಣ 2021ನೇ ಸಾಲಿನಲ್ಲಿ 50,000 ರಿಂದ 1 ಲಕ್ಷ ಜನಸಂಖ್ಯೆಯಿರುವ ನಗರಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯ ಮಟ್ಟದಲ್ಲಿ ಕಾರವಾರ ನಗರಸಭೆಗೆ ಪ್ರಥಮ ಸ್ಥಾನ ಹಾಗೂ ಶಿರಸಿ ನಗರಸಭೆಗೆ ದ್ವಿತೀಯ ಸ್ಥಾನ ಸಿಕ್ಕಿರುವುದು ಗೌರವದ ವಿಷಯವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!