ಹೊಸದಿಗಂತ ವರದಿ, ವಿಜಯಪುರ:
ಬಸನಗೌಡ ಪಾಟೀಲ ಯತ್ನಾಳ ಶೀಘ್ರದಲ್ಲೆ ಮಂತ್ರಿ ಆಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ನಗರದಲ್ಲಿ ಜಿಲ್ಲೆಗೆ ಅನ್ಯಾಯ ವಿಚಾರ ಕುರಿತು ಪ್ರತಿಕ್ರಿಯಿಸಿ, ಯತ್ನಾಳ ಅವರು ಮಂತ್ರಿ ಆಗೇ ಆಗುತ್ತಾರೆ, ಇದರಲ್ಲಿ ಎರಡು ಮಾತಿಲ್ಲ ಎಂದರು.
ಯತ್ನಾಳ ನನ್ನ ಆತ್ಮೀಯ ಮಿತ್ರರು, ಹಿಂದೆ ಕೇಂದ್ರ ಮಂತ್ರಿಯಾಗಿದ್ದವರು. ರಾಜ್ಯ ಸರ್ಕಾರದಲ್ಲಿ ಮಂತ್ರಿ ಆಗಬೇಕು, ಏನೋ ಅಡರು ತೊಡರುಗಳಿಂದ ಉಳಿದುಕೊಂಡಿದ್ದಾರೆ. ಮುಖ್ಯಮಂತ್ರಿಗಳು ಯತ್ನಾಳ ಅವರನ್ನು ಮಂತ್ರಿ ಮಾಡಬೇಕು, ಯತ್ನಾಳ ಮಂತ್ರಿ ಮಾಡೋಕೆ ನಾನು ಎಲ್ಲಾ ಸಪೋರ್ಟ್ ಮಾಡುತ್ತಿನಿ ಎಂದರು.
ಸಚಿವ ಸಂಪುಟದ ಬದಲಾವಣೆ ನಿರಂತರ ಜ್ಯೋತಿ ಇದ್ದಂಗೆ. ಆದರೂ ಸಹ ಎಲ್ಲೂ ಬದಲಾವಣೆ ಕಂಡು ಬಂದಿಲ್ಲ, ಮಂತ್ರಿ ಮಂಡಲದಲ್ಲಿ ಚರ್ಚೆ ಆಗ್ತಿಲ್ಲ. ಮಾಧ್ಯಮದ ಮುಖೇನ ಪ್ರತಿದಿನ ಚರ್ಚೆ ಆಗ್ತಿದೆ, ನಾವು ನೋಡ್ತಿದಿವಿ, ನೀವು ನೋಡ್ತಿದಿರಿ, ನೋಡಕೊಂಡು ಹೊಗೋಣ ಎಂದರು.
ಗುಪ್ತ ಸಭೆಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮದು ಗುಪ್ತಸಭೆ ಅಲ್ಲ, ನಮ್ಮ ಜಿಲ್ಲೆಯ ಮಹಾಂತೇಶ ಕವಟಗಿಮಠ ಅವರ ಸೋಲು ಹೇಗಾಯಿತು, ಕಾರಣವೇನು ಎಂಬುದರ ಬಗ್ಗೆ ಚರ್ಚೆ ಮಾಡಿದೀವಿ. ಮುಂಬರುವ ದಿನಗಳಲ್ಲಿ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಹೇಗೆ ಮಾಡಬೇಕು ಎಂಬುದನ್ನು ಹತ್ತು ಜನ ಶಾಸಕರು ಸೇರಿ ಚರ್ಚೆ ಮಾಡಿದಿವಿ. ಗುಪ್ತಸಭೆ ಅಲ್ಲಾ, ಯಾರನ್ನೂ ಬಿಡೋದು, ಯಾರನ್ನು ತಗೊಂಡು ಸಭೆ ಮಾಡೋದು ಅಂತೇನಿಲ್ಲ. ಸಹಜವಾಗಿ ಸೇರಿದ್ದ ಸಮಯದಲ್ಲಿ ಚರ್ಚೆ ಮಾಡಿದಿವಿ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ