ಹೊಸ ದಿಗಂತ ವರದಿ ಮಂಡ್ಯ :
ಜಾತಿ ಆಧಾರದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶುಕ್ರವಾರ ಹೇಳಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಬಳಿ ಖಾಸಗಿ ಹೋಟೆಲ್‌ನಲ್ಲಿ ಮುಖಂಡರು ಹಾಗೂ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಯೋಗ್ಯತೆ, ಸಾಧನೆ, ಸಾಮಾಜಿಕ ಕಳಕಳಿ ಹೊಂದಿರುವಂತ ಹಾಗೂ ನ್ಯಾಯ ಸಮ್ಮತ ಮನೋಭಾವ ಹೊಂದಿರುವಂತ ವ್ಯಕ್ತಿಗಳು ರಾಜ್ಯದ ಮುಖ್ಯಮಂತ್ರಿಯಾಗಬೇಕೆ ಹೊರತು ಜಾತಿ ಆಧಾರದ ಮೇಲೆ ಆಯ್ಕೆ ಮಾಡುವುದು ಸರಿಯಲ್ಲ ಅಭಿಪ್ರಾಯಿಸಿದರು.
ಭ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ
ರಾಜಕೀಯ ತನ್ನದೇ ಆದ ಕಾಲಘಟ್ಟದಲ್ಲಿ ಒಂದೊಂದು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಭ್ರಷ್ಟಾಚಾರ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ದೊಡ್ಡ ಮಾರಕವಾಗಿದೆ. ಎಲ್ಲಿಯವರೆಗೆ ಕೊಡುವವರು ಮತ್ತು ತೆಗೆದುಕೊಳ್ಳುವವರ ಮಧ್ಯೆ ಅಂತಃಕರಣ ಶುದ್ಧಿಯಿಂದ ಕಾಲನ್ನು ಇಡುತ್ತದೋ ಆದರ ಆಧಾರದ ಮೇಲೆ ಪ್ರಜಾಪ್ರಭುತ್ವ ನಿಲ್ಲುತ್ತದೆ ಎಂದು ಹೇಳಿದರು.
ನಾನೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕಾಲಘಟ್ಟಕ್ಕೆ ತಲುಪುವುದೇ ಅನಾರೋಗ್ಯಕರವಾದದ್ದು, ಪ್ರಶ್ನೆಯೇ ಇಲ್ಲಿ ಉದ್ಭವಿಸಬೇಕಾಗಿರಲಿಲ್ಲ. ಇತಿ ಮಿತಿ ಗಮನದಲ್ಲಿಟ್ಟುಕೊಂಡು ಮುಂದುವರೆದರೆ ಈ ದ್ವಂದ್ವಕ್ಕೆ ಪರಿಹಾರ ಸಿಗಬಹುದು ಎಂದು ಕಿವಿ ಮಾತು ಹೇಳಿದರು.